
ಗದಗ, 12 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಬಸ್ ಡಿಪೋಗೆ ಹೆಚ್ಚುವರಿ ಶೆಡ್ಯೂಲ್ ಹಾಗೂ ಹೊಸ ಬಸ್ಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ಕುಂದುಕೊರತೆ ಹೋರಾಟ ಸಮಿತಿಯ ವತಿಯಿಂದ ಬಸ್ ಡಿಪೋ ಎದುರು ಧರಣಿ ನಡೆಸಲಾಯಿತು.
ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೋ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು, ಡಿಪೋ ಆರಂಭವಾದ ದಿನದಿಂದಲೂ ಹಳೆಯ ಹಾಗೂ ದುರಸ್ಥಿಯಲ್ಲಿರುವ ಬಸ್ಗಳೇ ಸಂಚರಿಸುತ್ತಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಧರಣಿಯಲ್ಲಿ ಭಾಗವಹಿಸಿದ್ದ ಕೆಎಸ್ಸಾರ್ಟಿಸಿ ಡಿಸಿ (ಪಿ) ವೈ. ಗಡೇದ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಜೂನ್ 1ರಿಂದ ಹೆಚ್ಚುವರಿ ಶೆಡ್ಯೂಲ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲಿಯವರೆಗೆ ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್ಗಳನ್ನು ಲಿಂಕ್ ಸೇವೆಯ ರೂಪದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ಕುಂದುಕೊರತೆ ಹೋರಾಟ ಸಮಿತಿ ಅಧ್ಯಕ್ಷ ಅಕ್ಟರಸಾಬ ಯಾದಗಿರಿ, ಶ್ರೀನಿವಾಸ ಬಾರಬರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ರಫಿಕ್ ಕರಿಮನಿ ಮಾತನಾಡಿ, ಜಿಲ್ಲೆಯಾದ್ಯಂತ ಸುಮಾರು 50 ಹೊಸ ಬಸ್ಗಳು ಬಂದಿದ್ದರೂ ಶಿರಹಟ್ಟಿ ಡಿಪೋಗೆ ಕೇವಲ ನಾಲ್ಕು ಬಸ್ಗಳನ್ನು ಮಾತ್ರ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಪೋ ವ್ಯಾಪ್ತಿಯಲ್ಲಿ ಬಸ್ ಸೇವೆ ಸಮರ್ಪಕವಾಗಿಲ್ಲದೆ ಗ್ರಾಮೀಣ ಭಾಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಹರಿಪೂರ ರಸ್ತೆಯ ಕಾಮಗಾರಿಗೆ ₹22 ಲಕ್ಷ ಅನುದಾನ ಬಿಡುಗಡೆಯಾದರೂ ಇದುವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ತಕ್ಷಣ ರಸ್ತೆ ಕಾಮಗಾರಿ ಆರಂಭಿಸಿ, ಬಸ್ ಸೇವೆ ಸುಧಾರಣೆಗಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಗಳ ಭರವಸೆಯನ್ನು ನಂಬಿ ಜೂನ್ 1ರವರೆಗೆ ಪ್ರತಿಭಟನೆ ಹಿಂಪಡೆಯಲಾಗುತ್ತಿದೆ. ನಂತರವೂ ಸಮಸ್ಯೆ ಮುಂದುವರಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಈರಣ್ಣ ರಿತ್ತಿ ಹಾಗೂ ಶಿರಹಟ್ಟಿ ಠಾಣೆಯ ಸಿಪಿಐ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಧರಣಿ ಹಿಂಪಡೆಯುವಂತೆ ಮನವೊಲಿಸಿದರು.
ಧರಣಿಯಲ್ಲಿ ಡಿಪೋ ವ್ಯವಸ್ಥಾಪಕಿ ಮಹೇಶ್ವರಿ ಬೈಲಪತ್ತಾರ, ವಿಭಾಗೀಯ ಸಂಚಾರ ಅಧಿಕಾರಿ ಪಿ.ವಿ. ಮೇತ್ರಿ, ಶ್ರೀನಿವಾಸ ಕಪಟಕರ, ಜಾಕಿರ್ ಕೋಳಿವಾಡ, ಗೌಸ್ ಕಲಾವಂತರ, ಈರಣ್ಣ ಬಾಗೇವಾಡಿ, ಮಕಾಂದರ, ಮನ್ನಾ ಡಾಲಾಯತ್, ಮಲ್ಲಿಕಾರ್ಜುನ ಕಬಾಡಿ, ಗಫಾರ್ ಕುದರಿ, ಮೈನು ಭುವಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP