
ಕೋಲಾರ, ಮೇ ೧೨ (ಹಿ.ಸ) :
ಆ್ಯಂಕರ್ : ಕಳೆದ ಒಂದು ವರ್ಷದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಆಂತರಿಕವಾಗಿ ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಸಿ.ಎಂ.ಆರ್. ಶ್ರೀನಾಥ್ ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾರೆ. ಹಿರಿಯ ಐ.ಪಿ.ಎಸ್. ಅಧಿಕಾರಿ ಡಿ. ದೇವರಾಜ್ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬುದು ಅವರ ಚುಟವಟಿಕೆಗಳಿಂದ ಹೇಳಬಹುದಾಗಿದೆ. ಇದರಿಂದಾಗಿ ವಿಚಲಿತರಾಗಿರುವ ಸಿಎಂಆರ್ ಶ್ರೀನಾಥ್ ನೆರೆಯ ಶ್ರೀನಿವಾಸಪುರ ಕ್ಷೇತ್ರದ ಕಡೆ ಮುಖ ಮಾಡಿದ್ದರು.
ಕಳೆದ ಒಂದು ವರ್ಷದಿಂದ ಸಿಎಂ.ಆರ್. ಶ್ರೀನಾಥ್ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಬಹುತೇಕ ಯುವಕರು ಸಿಎಂಆರ್ ನಡೆ ಮತ್ತು ವರ್ಚಸ್ಸಿನಿಂದ ಆಕರ್ಷಿತರಾಗಿದ್ದಾರೆ. ಒಂದು ವೇಳೆ ಸಿಎಂಆರ್ ಶ್ರೀನಾಥ್ ಶ್ರೀನಿವಾಸಪುರದಿಂದ ಸ್ಪರ್ಧಿಸಿದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರಿಗೆ ಪ್ರಬಲ ಸ್ಪರ್ಧೆ ಒಡ್ಡಲಿದ್ಧಾರೆ ಎಂದು ಜೆಡಿಎಸ್ ಪಕ್ಷದ ಬಹುತೇಕ ಯುವಕರು ಹೇಳುತ್ತಾರೆ.
ಆದರೆ ಸಿ.ಎಂ.ಆರ್. ಶ್ರೀನಿವಾಸಪುರ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿರುವುದು ಅಲ್ಲಿನ ಜೆಡಿಎಸ್ ಮುಖಂಡರ ಕಣ್ಣು ಕೆಂಪಾಗಿಸಿದೆ. ರಮೇಶ್ ಕುಮಾರ್ ಸಾಂಪ್ರದಾಯಿಕ ಎದುರಾಳಿ ವೆಂಕಟಶಿವಾರೆಡ್ಡಿ ನಾನು ಯಾಕೆ ಸುಮ್ಮನೆ ಇರಲಿ. ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಸಿಎಂಆರ್ ಶ್ರೀನಾಥ್ ಹೊರಗಿನ ವ್ಯಕ್ತಿ ಎಂದು ಬಿಂಬಿಸಲಾಗುತ್ತಿದೆ. ಯಜಮಾನರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿಲ್ಲ. ಅವರು ನಮ್ಮ ನಾಯಕರು. ವೆಂಕಟಶಿವಾರೆಡ್ಡಿ ಇರುವಾಗ ಮತ್ತೊಬ್ಬರಿಗೆ ಅವಕಾಶವಿಲ್ಲ ಎಂಬುದು ಜೆಡಿಎಸ್ ಪಕ್ಷದ ಮುಂಚೂಣಿ ನಾಯಕರ ವಾದವಾಗಿದೆ.
ತೂಪಲ್ಲಿ ಚೌಡರೆಡ್ಡಿ ಮುಂತಾದವರು ಸಿಎಂ.ಆರ್. ಶ್ರೀನಾಥ್ ಶ್ರೀನಿವಾಸಪುರ ವಲಸೆ ರಾಜಕಾರಣವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಈ ಮಧ್ಯೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್ ಯಾದವ್ ಹೇಳಿಕೆ ನೀಡಿದ್ದು,
ಶ್ರೀನಿವಾಸಪುರ ಕ್ಷೇತ್ರದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನಮ್ಮ ನಾಯಕರಾಗಿದ್ದು, ಅವರು ಸ್ವಇಚ್ಚೆಯಿಂದ ಚುನಾವಣಾ ಕಣದಿಂದ ಹಿಂದೆ ಸರಿದರೆ ಕಣಕ್ಕಿಳಿಯಲು ತೂಪಲ್ಲಿ ನಾರಾಯಣಸ್ವಾಮಿ ಹಾಗೂ ಅಹಿಂದ ಸಮುದಾಯದಿಂದ ನಾನು ಸಿದ್ದನಿದ್ದೇನೆ ಇಲ್ಲಿ ಜೆಡಿಎಸ್ನಿಂದ ಹೊರಗಿನವರಿಗೆ ಅವಕಾಶವಿಲ್ಲ ಎಂದಿದ್ದಾರೆ.
ಸಿಎಂಆರ್.ಶ್ರೀನಾಥ್ ಅವರು ಕೋಲಾರ ಕ್ಷೇತ್ರದಲ್ಲಿ ಜನನಾಯಕರಾಗಿ ಗುರುತಿಸಿಕೊಂಡಿದ್ದು, ಅಲ್ಲಿ ಪಕ್ಷದ ಮುಂಚೂಣಿ ನಾಯಕರಾಗಿದ್ದಾರೆ, ಅವರು ಶ್ರೀನಿವಾಸಪುರಕ್ಕೆ ಬರುವುದೂ ಇಲ್ಲ, ಬಂದರೆ ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ವೆಂಕಟಶಿವಾರೆಡ್ಡಿ ಅವರು ಶಾಸಕರಾಗಿದ್ದು, ಇಲ್ಲಿ ಬೇರೆಯವರ ಸ್ಪರ್ಧೆಯ ವಿಷಯವೇ ಅಪ್ರಸ್ತುತವಾಗಿದೆ. ತೂಪಲ್ಲಿ ನಾರಾಯಣಸ್ವಾಮಿ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಪಕ್ಷಕ್ಕಾಗಿ ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ, ಹಾಗೆಯೇ ನಾನು ಸಹಾ ಅಹಿಂದಗೆ ಅವಕಾಶ ಸಿಕ್ಕಲ್ಲಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದು, ದಶಕಗಳಿಂದ ಶ್ರೀನಿವಾಸಪುರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದೇವೆ. ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದಿದ್ದೇನೆ, ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದಿದ್ದೇನೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಸ್ಥಳೀಯ ಆಕಾಂಕ್ಷಿಗಳು ಸಾಕಷ್ಟಿರುವಾಗ ಹೊರಗಿನ ಅಭ್ಯರ್ಥಿಗೆ ಇಲ್ಲಿ ಅವಕಾಶ ನೀಡುವುದಿಲ್ಲ, ನೀಡಿದರೂ ಅದನ್ನು ಸಹಿಸಲು ಸಾಧ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂಆರ್ ಶ್ರೀನಾಥ್ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗ ಶ್ರೀನಿವಾಸಪುರದ ಕಡೆ ಮುಖ ಮಾಡಿದ್ದರು. ಆದರೆ ಅಲ್ಲಿ ಸಿಎಂಆರ್ ಪ್ರವೇಶಕ್ಕೆ ಪ್ರತಿರೋಧ ಎದುರಾಗಿದೆ. ಇದರಿಂದಾಗಿ ಇಲ್ಲಿ ಇರುವುದು ನಮ್ಮ ಮನೆ, ಅಲ್ಲಿ ಇರುವುದು ಸುಮ್ಮನೆ ಎಂಬುವAತಾಗಿದೆ ಸಿಎಂಆರ್ ಶ್ರೀನಾಥ್ ಪರಿಸ್ಥಿತಿ. ಹಿರಿಯ ಐಪಿಎಸ್ ಅಧಿಕಾರಿ ಡಿ. ದೇವರಾಜ್ ಸೇವೆಯಲ್ಲಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ. ಇದರಿಂದಾಗಿ ಅವರು ಕಳೆದ ಒಂದು ವರ್ಷದಿಂದ ಸಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ದೇವರಾಜ್ ಮುಂದೆ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಬಹುದು. ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣ ಆರಂಭಿಸಿದರೆ ಜೆಡಿಎಸ್ ಟಿಕೆಟ್ಗಾಗಿ ಲಾಭಿ ನಡೆಸಲಿದ್ದಾರೆ ಎಂಬುದು ಸಿಎಂಆರ್ ಶ್ರೀನಾಥ್ ಆತಂಕಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಎಂಆರ್ ಶ್ರೀನಾಥ್ ಕೋಲಾರದಲ್ಲಿ ಸಕ್ರಿಯರಾಗಿದ್ದಾರೆ. ನಾನು ಕಳೆದ ಏಳು ವರ್ಷಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಏನೇ ಆಗಲಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಒಂದು ವೇಳೆ ಜೆಡಿಎಸ್ ಟಿಕೆಟ್ ಕೈತಪ್ಪಿದರೆ ಜನರ ಮುಂದೆ ಹೋಗಿ ನ್ಯಾಯ ಕೇಳುತ್ತೇನೆ ಎಂದು ಸಿಎಂಆರ್ ಶಪತ ಮಾಡಿರುವುದಾಗಿ ಅವರ ಸಮೀಪವರ್ತಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್