




ಕೊಪ್ಪಳ, 12 ಮೇ (ಹಿ.ಸ.) :
ಆ್ಯಂಕರ್ : ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಮೇ 12 ರಿಂದ ಮೇ 22 ರವರೆಗೆ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ``ಕೊಪ್ಪಳ ಮಾವು ಮೇಳ-2026''ರ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮೇ 12ರಂದು ಚಾಲನೆ ದೊರೆಯಿತು.
ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಸೇರಿದಂತೆ ಹಲವು ಗಣ್ಯರು ಬೆಳಗ್ಗೆ ತೋಟಗಾರಿಕಾ ಇಲಾಖೆಯ ಆವರಣಕ್ಕೆ ಆಗಮಿಸಿ ಮಾವು ಮೇಳದಲ್ಲಿನ ವಿವಿಧ ಬಗೆಯ ಹಣ್ಣುಗಳನ್ನು ಹಾಗೂ ಅವುಗಳ ಉತ್ಪನ್ನಗಳ ವೀಕ್ಷಣೆ ಮಾಡಿ ಮಾವು ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೆ ವೇಳೆ ರುಚಿಕರವಾದ ಸೀಕರಣೆ ಮತ್ತು ಮಾವಿನ ರುಚಿ ಸವಿದರು.
ಕೊಪ್ಪಳ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ಮಾವು ಮೇಳದ ಬಗ್ಗೆ ಗಣ್ಯರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಹಾಪಕಾಮ್ಸ್ ಅಧ್ಯಕ್ಷರಾದ ಯಂಕಣ್ಣ ಯರಾಶಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಯಲಬುರ್ಗಾದ ಲಿಂಗನಗೌಡ, ಗಂಗಾವತಿಯ ಯೋಗೇಶ್ವರ, ಕುಷ್ಟಗಿಯ ಶಿವಯೋಗಪ್ಪ, ಕೊಪ್ಪಳದ ರವಿಂದ್ರ ಹಂಚಿನಾಳ, ತೋಟಗಾರಿಕೆ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕರಾದ ಸತೋಷ ಧರಣ ಸೇರಿದಂತೆ ಇತರೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಗಮನ ಸೆಳೆದ ಹಣ್ಣುಗಳು : ಕೊಪ್ಪಳ ಮಾವು ಮೇಳದಲ್ಲಿ ಕೇಸರ್, ದಶಹರಿ, ಆಪೂಸ್, ಬೆನೆಶಾನ್, ಮಲ್ಲಿಕಾ, ಸಿಂಧೂರಿ, ಇಮಾಮ ಪಸಂದ, ತೋತಾಪುರಿ, ಕಲ್ಮಿ ಮತ್ತು ಇತ್ಯಾದಿ ಮಾವಿನ ಹಣ್ಣುಗಳು ಹಾಗೂ ಉಪ್ಪಿನಕಾಯಿ ಮಾವಿನ ಕಾಯಿಗಳು, ಮಾವಿನ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್