
ವಿಜಯಪುರ, 12 ಮೇ (ಹಿ.ಸ.) :
ಆಂಕರ್ : ದೇಶದ ಭದ್ರತೆ ಮತ್ತು ರಾಷ್ಟ್ರ ಹಿತದ ಪ್ರಶ್ನೆ ಬಂದಾಗ ರಾಜಕೀಯ ಭೇದ ಭಾವಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ವಿಜಯಪುರದಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ರಾಜ್ಯಾಧ್ಯಕ್ಷ ರಾಘವ್ ಅಣ್ಣಿಗೇರಿ ಕರೆ ನೀಡಿದ್ದಾರೆ.
ಅಮೆರಿಕಾ–ಇರಾನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಾಗೂ ರಾಜಕೀಯ ಅಸ್ಥಿರತೆಯನ್ನು ಉಂಟುಮಾಡಿದ್ದು, ಭಾರತವೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತವು ಶೇಕಡ 88 ರಷ್ಟು ಕಚ್ಚಾ ತೈಲವನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ಈಗಾಗಲೇ ಅನೇಕ ರಾಷ್ಟ್ರಗಳು ಯುದ್ಧದ ಪರಿಣಾಮದಿಂದ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಆಡಳಿತದಿಂದ ಭಾರತದಲ್ಲಿ ಯಾವುದೇ ದೊಡ್ಡ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕರೂ ದೇಶದ ಹಿತವನ್ನು ಮೊದಲಿಗಾಗಿಟ್ಟುಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ಯಾವ ವಿಷಯದಲ್ಲಿಯೂ ಮೋದಿಯವರನ್ನು ಟೀಕಿಸುವುದನ್ನೇ ತನ್ನ ರಾಜಕಾರಣ ಮಾಡಿಕೊಂಡಿದೆ. ಕೊರೋನಾ ಬಂದರೂ ಮೋದಿ ಕಾರಣ, ಜಾಗತಿಕ ಯುದ್ಧ ನಡೆದರೂ ಮೋದಿ ಕಾರಣ ಎನ್ನುವ ಮಟ್ಟಕ್ಕೆ ಕಾಂಗ್ರೆಸ್ ಇಳಿದಿದೆ ಎಂದು ವ್ಯಂಗ್ಯವಾಡಿದರು.
ಯುದ್ಧದ ಅಪಾಯವನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಬಂಗಾರ ಖರೀದಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬೇಕು, ಸಾಧ್ಯವಾದಷ್ಟು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬಳಕೆ ಇಳಿಸಬೇಕು ಹಾಗೂ ಅನಗತ್ಯ ವಿದೇಶ ಪ್ರವಾಸಗಳನ್ನು ತಪ್ಪಿಸಬೇಕು ಎಂದು ಕರೆ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ದೇಶದ ಹಿತಕ್ಕಾಗಿ ನೀಡಿದ ಈ ಸಲಹೆಯನ್ನು ಎಲ್ಲರೂ ಗೌರವಿಸಬೇಕು ಎಂದರು.
ಇದೇ ರೀತಿಯ ಕರೆಗಳನ್ನು ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಮತ್ತು ವೀರಪ್ಪ ಮೊಯ್ಲಿ ಸೇರಿದಂತೆ ಹಲವಾರು ನಾಯಕರು ನೀಡಿದಾಗ ದೇಶದ ಜನತೆ ಸಹಕಾರ ನೀಡಿದ್ದರು. ಆದರೆ ಇಂದು ಕಾಂಗ್ರೆಸ್ ಇಂತಹ ವಿಷಯಗಳಲ್ಲೂ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ನರೇಂದ್ರ ಮೋದಿ ಸರ್ಕಾರ ಕೈಗೊಂಡ ಹಲವು ನಿರ್ಣಯಗಳಿಗೆ ಕಾಂಗ್ರೆಸ್ ನಿರಂತರವಾಗಿ ವಿರೋಧ ವ್ಯಕ್ತಪಡಿಸಿದೆ. ಟ್ರಿಪಲ್ ತಲಾಖ್ ನಿಷೇಧ, ಜಿಎಸ್ಟಿ, ಅಕ್ರಮ ವಲಸಿಗರ ನಿಯಂತ್ರಣ, ಸಿಎಎ-ಎನ್ಆರ್ಸಿ, ಆರ್ಟಿಕಲ್ 370 ರದ್ದು, ಮಹಿಳಾ ಮೀಸಲು, ಸರ್ಜಿಕಲ್ ಸ್ಟ್ರೈಕ್, ರಾಮ ಮಂದಿರ ನಿರ್ಮಾಣ ಸೇರಿದಂತೆ ಅನೇಕ ರಾಷ್ಟ್ರ ಹಿತದ ಕ್ರಮಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಇಂತಹ ನೀತಿಗಳಿಂದಲೇ ದೇಶದಲ್ಲಿ ಅದರ ನೆಲೆ ಕುಸಿಯುತ್ತಿದೆ.
ವಿನಾಶ ಕಾಲೇ ವಿಪರೀತ ಬುದ್ಧಿ” ಎಂಬಂತಾಗಿದೆ ಎಂದು ಕಿಡಿಕಾರಿದರು.
ದೇಶದ ಭದ್ರತೆ ಮತ್ತು ರಾಷ್ಟ್ರ ರಕ್ಷಣೆಯ ವಿಷಯದಲ್ಲಿ ದೇಶಭಕ್ತರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಂತಿದ್ದಾರೆ. ಯುದ್ಧದ ಪರಿಸ್ಥಿತಿ ಸಂಪೂರ್ಣವಾಗಿ ಶಮನವಾಗುವವರೆಗೆ ಬಂಗಾರ ಖರೀದಿ ಕಡಿಮೆ ಮಾಡುವುದು, ಪೆಟ್ರೋಲ್-ಡೀಸೆಲ್ ಬಳಕೆ ತಗ್ಗಿಸುವುದು ಹಾಗೂ ಅನಗತ್ಯ ವಿದೇಶ ಪ್ರವಾಸಗಳನ್ನು ತಪ್ಪಿಸುವ ಸಂಕಲ್ಪ ಮಾಡಿದ್ದೇವೆ ಎಂದು ರಾಘವ್ ಅಣ್ಣಿಗೇರಿ ತಿಳಿಸಿದ್ದಾರೆ.
“ಸೋಚ್ ಬದಲೋ – ದೇಶ ಬದ್ಲೇಗಾ” ಹಾಗೂ “ವಂದೇ ಮಾತರಂ” ಘೋಷಣೆಗಳೊಂದಿಗೆ ಅವರು ತಮ್ಮ ಪ್ರಕಟಣೆಯನ್ನು ಮುಕ್ತಾಯಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande