ಭೀಮಾ-ಕೃಷ್ಣಾ ನದಿ ನೀರಿನ ಗೊಂದಲಕ್ಕೆ ಶಾಶ್ವತ ಪರಿಹಾರ ; ಉನ್ನತ ಮಟ್ಟದ ನಿಯೋಗ-ಶಾಸಕ ಯಶವಂತರಾಯಗೌಡ ಪಾಟೀಲ
ವಿಜಯಪುರ, 12 ಮೇ (ಹಿ.ಸ.) : ಆಂಕರ್ : ಭೀಮಾ ಹಾಗೂ ಕೃಷ್ಣಾ ನದಿಗಳ ನೀರಿನ ಬಳಕೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಮುಂದುವರಿದಿರುವ ಗೊಂದಲವನ್ನು ಸೌಹಾರ್ದಯುತವಾಗಿ ಪರಿಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಜಯಪುರ, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಯ ಶಾಸಕರನ್ನೊಳಗೊಂಡ ಉನ್ನತ ಮಟ್
ಗೌಡ


ವಿಜಯಪುರ, 12 ಮೇ (ಹಿ.ಸ.) :

ಆಂಕರ್ : ಭೀಮಾ ಹಾಗೂ ಕೃಷ್ಣಾ ನದಿಗಳ ನೀರಿನ ಬಳಕೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಮುಂದುವರಿದಿರುವ ಗೊಂದಲವನ್ನು ಸೌಹಾರ್ದಯುತವಾಗಿ ಪರಿಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಜಯಪುರ, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಯ ಶಾಸಕರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಮಹಾರಾಷ್ಟ್ರ ಸರ್ಕಾರದ ಭೇಟಿಗೆ ಕರೆದೊಯ್ಯುವ ಮಹತ್ವದ ಕಾರ್ಯ ಕೈಗೊಳ್ಳಲಾಗುವುದು ಎಂದು ಇಂಡಿ ಶಾಸಕ ಯಶ್ವಂತರಾಯಗೌಡ ಪಾಟೀಲ್ ಹೇಳಿದರು.

ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಹಾರಾಷ್ಟ್ರ ಸರ್ಕಾರ ಮಾನವೀಯತೆ ಹಾಗೂ ಸಹೋದರತೆಯ ನೆಲೆಯಲ್ಲಿ ಉಜಣಿ ಜಲಾಶಯದಿಂದ 16 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಿರುವುದು ಎರಡು ರಾಜ್ಯಗಳ ನಡುವಿನ ಉತ್ತಮ ಬಾಂಧವ್ಯದ ಸಂಕೇತವಾಗಿದೆ ಎಂದು ಹೇಳಿದರು.

ಪ್ರತಿ ಬಾರಿ ಮಹಾರಾಷ್ಟ್ರ ಸರ್ಕಾರ ನೀರು ಬಿಡುವ ನಿರ್ಧಾರವನ್ನು ಅವಲಂಬಿಸದೇ, ಕೃಷ್ಣಾ ಮತ್ತು ಭೀಮಾ ನದಿಗಳಿಗೆ ಸಂಬಂಧಿಸಿದ ಕುಡಿಯುವ ನೀರಿನ ಯೋಜನೆಗಳನ್ನು ಶಾಶ್ವತವಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಶಾಸಕರನ್ನೊಳಗೊಂಡ ನಿಯೋಗ ಮಹಾರಾಷ್ಟ್ರ ಸರ್ಕಾರವನ್ನು ಭೇಟಿ ಮಾಡಿ ಸಮಗ್ರ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.

ಇಂಡಿ ಭಾಗದಲ್ಲಿ ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುತ್ತಿತ್ತು. ಈ ಬಾರಿ ಮಹಾರಾಷ್ಟ್ರ ಸರ್ಕಾರ ನೀರು ಹರಿಸದೇ ಇದ್ದರೆ ದೊಡ್ಡ ಮಟ್ಟದ ನೀರಿನ ಅಭಾವ ಎದುರಾಗುತ್ತಿತ್ತು ಎಂದು ಹೇಳಿದರು.

ಸೊಲ್ಲಾಪೂರ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳಿಗೆ ಕುಡಿಯುವ ನೀರಿನ ಪೂರೈಕೆ ಅಗತ್ಯವಿದ್ದರೂ ಸಹೋದರ ಭಾವದಿಂದ ಭೀಮಾ ನದಿಗೆ ನೀರು ಹರಿಸಿರುವುದಕ್ಕೆ ಅವರು ಕೃತಜ್ಞತೆ ವ್ಯಕ್ತಪಡಿಸಿದರು.

ಸಾಂಗ್ಲಿ, ಜತ್ತ ಸೇರಿದಂತೆ ಮಹಾರಾಷ್ಟ್ರದ ಗಡಿಭಾಗ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿಕೊಂಡಿದೆ. “ನಾವು ನಿಮಗೆ ನೀರು ಕೊಡುತ್ತೇವೆ, ನೀವು ನಮಗೆ ನೀರು ಕೊಡಿ” ಎಂಬ ಸಹೋದರತೆಯ ಮನೋಭಾವವನ್ನು ಮಹಾರಾಷ್ಟ್ರ ಸರ್ಕಾರ ವ್ಯಕ್ತಪಡಿಸಿದ್ದು, ಈ ಮನವಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.

ಭಾಗದಲ್ಲಿ ವಿದ್ಯುತ್ ಪೂರೈಕೆ ಸುಧಾರಣೆಗೆ ಅನೇಕ 330 ಕೆವಿ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಿ ನಿರಂತರ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಲಾಗಿದೆ ಎಂದ ಅವರು, ಶಿಕ್ಷಣ ಕ್ಷೇತ್ರದಲ್ಲಿಯೂ ಇಂಡಿ ತಾಲೂಕು ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಪಿಯು ಕಾಲೇಜು, ಪದವಿ ಕಾಲೇಜು ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಹಡಲಸಂಗ ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾದ ಪಿಯು ಕಾಲೇಜು ಮಂಜೂರಾಗಿದ್ದು, ಶಿರಶ್ಯಾಡ ಗ್ರಾಮದ ಮೂರು ದಶಕಗಳ ಬೇಡಿಕೆಯಾದ ಪಿಯು ಕಾಲೇಜು ಕೂಡ ಆರಂಭವಾಗಿದೆ.

ಬಸನಾಳದಲ್ಲಿಯೂ ಪಿಯು ಕಾಲೇಜು ಪ್ರಾರಂಭಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವೇಶಾತಿ ಕೊರತೆಯಿಂದ ಮುಚ್ಚಲ್ಪಟ್ಟಿದ್ದ ಕಾಲೇಜುಗಳನ್ನು ಇಂಡಿ ಮತಕ್ಷೇತ್ರಕ್ಕೆ ಸ್ಥಳಾಂತರಿಸಲು ಯಶಸ್ವಿಯಾಗಿದ್ದೇನೆ ಎಂದು ವಿವರಿಸಿದರು.

ಇದೇ ವೇಳೆ ಭೀಮಾ-ಕೃಷ್ಣಾ ನದಿ ನೀರಿನ ಹಂಚಿಕೆ ಮತ್ತು ಬಳಕೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ರಾಜ್ಯಗಳ ನಡುವಿನ ಗೊಂದಲಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande