
ಗದಗ, 12 ಮೇ (ಹಿ.ಸ.) :
ಆ್ಯಂಕರ್ : ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಯುವ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಹಯೋಗದಲ್ಲಿ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಹೆಚ್.ಸಿ.ಐ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಅಗ್ನಿ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಗದಗದ ಅಧ್ಯಕ್ಷ ರಾಜೇಂದ್ರ ಗೋಡಬೋಲೆ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ, ಅದರ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಮಾಜದಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಲ್ಲಿಸುತ್ತಿರುವ ಸೇವೆ ಮಹತ್ವದ್ದಾಗಿದ್ದು, ಯುವಕರು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಗದಗ ಅಗ್ನಿಶಾಮಕ ಠಾಣಾಧಿಕಾರಿ ಲೋಕೇಶ್ ಜಿ.ಕೆ. ಅವರು ಅಗ್ನಿ ಅವಘಡಗಳ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಅಗ್ನಿಶಾಮಕ ಉಪಕರಣಗಳ ಸರಿಯಾದ ಬಳಕೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ನೀಡಿದರು. ಅಗ್ನಿಶಾಮಕ ಸಾಧನಗಳ ಪ್ರಾಯೋಗಿಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
“ಅಗ್ನಿ ಅವಘಡಗಳ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಮತ್ತು ಜಾಗೃತಿಯೇ ಜೀವ ರಕ್ಷಿಸುವ ಪ್ರಮುಖ ಅಂಶ” ಎಂದು ಲೋಕೇಶ್ ಜಿ.ಕೆ. ತಿಳಿಸಿದರು.
ಇದೇ ವೇಳೆ ಡಾ. ಮೆಹರವಾಡೆ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡದಿಂದ ಉಚಿತ ಕಣ್ಣಿನ ಆರೋಗ್ಯ ತಪಾಸಣೆ ನಡೆಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಪಲ್ಲವಿ ಬುಯ್ಯಾರವ ವಹಿಸಿದ್ದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ವಿಶ್ವನಾಥ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹುಲಕೋಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಎಂ. ಮೂಲಿಮನಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಪ್ರೊ. ನಿಸಾರ್ ಅಹಮದ್, ಉಪನ್ಯಾಸಕರಾದ ಎಂ.ವಿ. ಹಿರೇಮಠ, ಪ್ರೊ. ನಾಜೀಮಾ ಎನ್. ಮುಲ್ಲಾ, ಶ್ರೀಕಾಂತ ಐಲಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರ ಮಂಜುನಾಥ್ ದೇಸಾಯಿ ನಿರೂಪಿಸಿ, ಇಮಾಮ್ ಬಾಷಾ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP