ನಾಳೆ ಹುಬ್ಬಳ್ಳಿಯಲ್ಲಿ ಗೋ ಆಧಾರಿತ ಸದ್ವಿಚಾರಗೋಷ್ಠಿ
ಖ್ಯಾತ ಚಿಂತಕ ಕೆ.ಇ.ಎನ್. ರಾಘವನ್ ಉಪನ್ಯಾಸ
ಕೆ.ಇ.ಎನ್. ರಾಘವನ್


ಹುಬ್ಬಳ್ಳಿ, 12 ಮೇ (ಹಿ.ಸ.) :

ಆ್ಯಂಕರ್ : ಕೆ.ಇ.ಎನ್. ರಾಘವನ್ ಅವರಿಂದ ಗೋ ಆಧಾರಿತ ಜೀವನ ಪದ್ಧತಿ, ಸಾವಯವ ಕೃಷಿ ಹಾಗೂ ಭಾರತೀಯ ಜ್ಞಾನ ಸಂಪ್ರದಾಯಗಳ ಕುರಿತು ವಿಶೇಷ ಸದ್ವಿಚಾರಗೋಷ್ಠಿ ಮೇ 13ರಂದು ಸಾಯಂಕಾಲ 6 ಗಂಟೆಗೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಗೋ ಸೇವಾ ಗತಿವಿಧಿ ವತಿಯಿಂದ ಸಂಘ ಕಾರ್ಯಾಲಯ ಕೇಶವ ಕುಂಜದಲ್ಲಿ ಆಯೋಜಿಸಲಾಗಿದೆ.

ಮೂಲತಃ ಚೆನ್ನೈ ನಿವಾಸಿಯಾಗಿರುವ ರಾಘವನ್ ಜೀ ಅವರು ವಿದ್ಯಾಭ್ಯಾಸದ ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಪೂರ್ಣಾವಧಿ ಕಾರ್ಯಕರ್ತರಾಗಿ ಐದು ವರ್ಷಗಳ ಕಾಲ ಬಿಹಾರದಲ್ಲಿ ಹಾಗೂ ನಂತರ ಹತ್ತು ವರ್ಷಗಳ ಕಾಲ ಅಸ್ಸಾಂನಲ್ಲಿ ಪ್ರಾಂತ ಸಂಘಟನಾ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2001ರಿಂದ 2015ರವರೆಗೆ ವಿಶ್ವ ಹಿಂದೂ ಪರಿಷತ್ನ ಏಕಲ ವಿದ್ಯಾಲಯ ವಿಭಾಗದಲ್ಲಿ ಕೇಂದ್ರ ಟೋಳಿಯ ಪ್ರಶಿಕ್ಷಣ ಪ್ರಮುಖರಾಗಿ ಜವಾಬ್ದಾರಿ ನಿರ್ವಹಿಸಿದ್ದರು. 2008-09ರಲ್ಲಿ ನಡೆದ ವಿಶ್ವಮಂಗಲ ಗೋಗ್ರಾಮ ಯಾತ್ರೆಯ ಯಾತ್ರಾ ಪ್ರಮುಖರಾಗಿಯೂ ಕಾರ್ಯನಿರ್ವಹಿಸಿದ್ದರು.

2016ರಿಂದ ಗೋ ಸೇವಾ ಗತಿವಿಧಿಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿರುವ ಅವರು ಗೋ ಆಧಾರಿತ ಸಾವಯವ ಕೃಷಿ, ಮಳೆನೀರು ಕೊಯ್ಲು, ಲಂಬ ಕೃಷಿ, ಬಹುಮಿಶ್ರ ಬೆಳೆ ಪದ್ಧತಿ ಹಾಗೂ ಗೋವಿನ ಉತ್ಪನ್ನಗಳ ಶಾಸ್ತ್ರಬದ್ಧ ತಯಾರಿಕೆ ಕುರಿತು ದೇಶದಾದ್ಯಂತ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. “ಒಂದು ಎಕರೆ ಭೂಮಿ – ಒಂದು ಕುಟುಂಬ – ಎರಡು ಹಸುಗಳು ಮತ್ತು ಎತ್ತುಗಳು – ವೈಯಕ್ತಿಕ ಉತ್ಪಾದನೆ, ಸಾಮೂಹಿಕ ಮಾರುಕಟ್ಟೆ” ಎಂಬ ಪರಿಕಲ್ಪನೆಯಡಿ ಕಾರ್ಯನಿರ್ವಹಿಸುತ್ತಿರುವ ಅವರು ಇದುವರೆಗೆ 85 ಸಾವಿರಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಿದ್ದಾರೆ.

ಭಾರತೀಯ ಗೋವಿನ ಮಹತ್ವದ ಕುರಿತು ಪ್ರಾಚೀನ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿರುವ ರಾಘವನ್ ಅವರು ಭಾರತೀಯ ಜ್ಞಾನ ಪರಂಪರೆ ಮತ್ತು ಆಧುನಿಕ ವಿಜ್ಞಾನವನ್ನು ಸಂಯೋಜಿಸುವ ಕೃಷಿ ಪದ್ಧತಿಯ ಕುರಿತು ಅನೇಕ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳು, ಆಯುರ್ವೇದ ಮಹಾವಿದ್ಯಾಲಯಗಳು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಅಮ್ಮಿನಭಾವಿಯ ಶ್ರೀ ಸಂಸ್ಥಾನ ಪಂಚಗ್ರಹ ಹಿರೇಮಠದ ಪರಮಪೂಜ್ಯ ಷ.ಬ್ರ. ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಗೋ ಸೇವಾ ಗತಿವಿಧಿಯ ಮಹಾಪೋಷಕರಾದ ಖ್ಯಾತ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಎಲ್ಲಾ ಗೋಭಕ್ತರು ಸದ್ವಿಚಾರಗೋಷ್ಠಿಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಗೋ ಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಸಂಯೋಜಕರಾದ ದತ್ತಾತ್ರೇಯ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande