
ಬಾಗಲಕೋಟೆ, 12 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ನವನಗರದ ಸೆಕ್ಟರ್ ನಂ.34 ರಲ್ಲಿರುವ ಪೊಲೀಸ್ ಟ್ರೇನಿಂಗ್ ಶಾಲೆ ಮುಂಭಾಗದ ರಸ್ತೆಯ ಅಂಗಡಿಗಳ ಮುಂದೆ ಚರಂಡಿಯಲ್ಲಿನ ಕಸವನ್ನು ತೆರವುಗೊಳಿಸಿ ಹಾಗೆಯೇ ಬಿಟ್ಟು ಹೋಗಿದ್ದ ಹಿನ್ನೆಲೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.
ಈ ಕುರಿತು ಸ್ಥಳೀಯ ಸಮಸ್ಯೆಯನ್ನು ಹಿಂದೂಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ವರದಿ ಬಿತ್ತರಿಸಿತ್ತು. ಅದರಿಂದ ಎಚ್ಚೆತ್ತುಕೊಂಡ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ನೀಡಿದ್ದ ಭರವಸೆಯಂತೆ ಇಂದು ಬೆಳಿಗ್ಗೆ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಸ್ವಚ್ಛತೆ ಮಾಡಿದರು.
ಚರಂಡಿಯಲ್ಲಿದ್ದ ಕಸ ಹಾಗೂ ಮಣ್ಣು ರಸ್ತೆ ಬದಿಯಲ್ಲೇ ಬಿದ್ದಿದ್ದರಿಂದ ದುರ್ವಾಸನೆ ಉಂಟಾಗುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಅಂಗಡಿ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದರು. ಮಳೆ ಬಂದಲ್ಲಿ ಕಸ ಮತ್ತೆ ಚರಂಡಿಗೆ ಸೇರುವ ಸಾಧ್ಯತೆ ಇದ್ದು, ಆರೋಗ್ಯ ಸಮಸ್ಯೆಗಳು ಉಂಟಾಗುವ ಆತಂಕವೂ ಎದುರಾಗಿತ್ತು.
ಈ ಸಮಸ್ಯೆಯನ್ನು ಗಮನಿಸಿ ವರದಿ ಪ್ರಸಾರ ಮಾಡಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಇಂದು ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿ ಚರಂಡಿಯ ಪಕ್ಕದಲ್ಲಿ ಬಿದ್ದಿದ್ದ ಕಸವನ್ನು ಸಂಪೂರ್ಣ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ನಡೆಸಿದರು.
ಸ್ಥಳೀಯರು ಅಧಿಕಾರಿಗಳ ತ್ವರಿತ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಸ್ಯೆ ಪರಿಹಾರಗೊಂಡ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟರು.
ಸ್ವಚ್ಛತಾ ಕಾರ್ಯ ಕೈಗೊಂಡ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾರ್ವಜನಿಕರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ. “ನಮ್ಮ ಮನವಿಗೆ ಸ್ಪಂದಿಸಿ ತಕ್ಷಣ ಕ್ರಮ ಕೈಗೊಂಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande