
ಗದಗ, 12 ಮೇ (ಹಿ.ಸ.) :
ಆ್ಯಂಕರ್ : ಶಾಲಾ ಜೀವನದಲ್ಲೇ ಮಕ್ಕಳಿಗೆ ಅಂಕಗಳನ್ನೇ ಜೀವನದ ಗುರಿಯನ್ನಾಗಿ ಮಾಡಬಾರದು. ಅಂಕಗಳ ಹೆಸರಿನಲ್ಲಿ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಸಲ್ಲದು. ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಪ್ರೋತ್ಸಾಹ ನೀಡಿ, ಅವರ ಪ್ರತಿಭೆ ಬೆಳೆಯಲು ಪೋಷಕರು ಮತ್ತು ಶಿಕ್ಷಕರು ಸಹಕರಿಸಬೇಕು ಎಂದು ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.
ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಉತ್ಸವ ಗಾರ್ಡನ್ನಲ್ಲಿಂದು ನಡೆದ ಎಫ್.ಎಂ. ಡಬಾಲಿ ಹಾಗೂ ಎಂ.ಎಫ್. ಡಬಾಲಿ ಚಿಕಿತ್ಸಾಶಾಲೆಯ 2004-05ನೇ ಸಾಲಿನ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
“ಅಂಕಗಳೇ ಎಲ್ಲವೂ ಅಲ್ಲ. ಅದನ್ನು ಮೀರಿಯೂ ಅನೇಕ ಅವಕಾಶಗಳಿವೆ. ವಿದ್ಯೆಯ ಜೊತೆಗೆ ಸಂಸ್ಕಾರವೂ ಅಗತ್ಯ. ಬಾಲ್ಯ ಮತ್ತು ವಿದ್ಯಾರ್ಥಿ ಜೀವನವು ಅತ್ಯಂತ ಮಹತ್ವದ ಘಟ್ಟವಾಗಿದ್ದು, ಆರಂಭಿಕ ಹಂತದಲ್ಲೇ ಮಕ್ಕಳಲ್ಲಿ ಉತ್ತಮ ಚಿಂತನೆಗಳನ್ನು ಬಿತ್ತುವ ಕೆಲಸ ಆಗಬೇಕು” ಎಂದು ಅವರು ಹೇಳಿದರು.
ಮಕ್ಕಳನ್ನು ಮಾನಸಿಕವಾಗಿ ದೃಢಪಡಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಹೇರದೇ, ಅವರ ಸಾಮರ್ಥ್ಯ ಅರಿತು ಪ್ರೋತ್ಸಾಹಿಸುವುದು ಅಗತ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಗುರುವಿನ ಮಹತ್ವವನ್ನು ವಿವರಿಸಲು ಶಬ್ದಗಳೇ ಸಾಲದು. ಶಿಕ್ಷಕರ ಶ್ರಮವೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ” ಎಂಬ ಮಾತಿನಂತೆ, ಗುರುವಿನ ಬಗ್ಗೆ ಇರುವ ಭಕ್ತಿ ಮತ್ತು ಸಮರ್ಪಣೆ ಜೀವನಪರ್ಯಂತ ನಮ್ಮನ್ನು ಕೈಬಿಡುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಣಕವಾಡ ಶ್ರೀಗಳು ಮಾತನಾಡಿ, 2004-05ನೇ ಸಾಲಿನ ಎಫ್.ಎಂ. ಡಬಾಲಿ ಚಿಕಿತ್ಸಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಮತ್ತಷ್ಟು ಮೆರಗು ತಂದಿದೆ. ಉತ್ಸವ ಗಾರ್ಡನ್ನಲ್ಲಿ ಕ್ರೀಡೆ, ಮನರಂಜನೆ ಸೇರಿದಂತೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಬೋಧನೆ ಮಾಡಿದ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿರುವುದು ಮಾದರಿ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಂ.ಕೆ. ಲಮಾಣಿ, ಎಸ್.ಎಸ್. ಪಾಟೀಲ, ನಾರಾಯಣ ಮಹೇಂದ್ರಕರ, ಗಂಗಮ್ಮ ಕರಕಣ್ಣವರ, ಜಯತೀರ್ಥ ಕುಲಕರ್ಣಿ, ಚನ್ನಪ್ಪ ಸಂಕದಾಳ, ಪದ್ಮರಾಜ ಬಸ್ತಿ, ಶಶಿಕಲಾ ಹೊಸಮನಿ, ಶಂಕರ ಕುಂದಿ, ಹುಡೇದಮನಿ, ಬಸವರಾಜ ಲಾಲಪ್ಪ ಚಿಂಚಲಿ, ನಾಯಕ, ಬಿ.ಬಿ. ಬಾಬುಖಾನವಾರ, ರಮೇಶ ಬಟಗುರ್ಕಿ, ಶಿವಯೋಗಿ ಶೆಟ್ಟರ ಹಾಗೂ ನಿಂಗಪ್ಪ ಉಡಚಗೊಂಡ ಅವರನ್ನು ಸನ್ಮಾನಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಉಮೇಶ ಅತ್ತಿಗೇರಿ, ಫಕೀರೇಶ ರಟ್ಟಿಹಳ್ಳಿ, ಚಂದ್ರು ಸ್ವಾಮಿ, ಗೂಳಪ್ಪ ಕರಿಗಾರ, ಮಂಜುನಾಥ ರಿತ್ತಿ, ಶ್ರೀನಿವಾಸ ಕಪಟಕರ, ವಿಠಲ ಬಿಡವೆ, ಮುತ್ತು ತೆಗ್ಗಿನಹಳ್ಳಿ, ಸಂತೋಷ ಕೋಳಿ, ಪರಶುರಾಮ ಗಾಡಿ, ಫಕೀರೇಶ ನಿಟ್ಟಾಲಿ, ಇಬ್ರಾಯಿಂ ಮನಿಯಾರ, ವಿರೇಶ ಬೋರಶೆಟ್ಟರ, ಸವಿತಾ ಬಸ್ತಿ, ವಿಜಯಲಕ್ಷ್ಮೀ ಮಜ್ಜಗಿ, ಮಂಗಳಗೌರಿ ಹೂಗಾರ, ಶಬಾನಾ ಕಾರಬುದಿ, ರೂಪಾ ಜಾಧವ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP