
ಗದಗ, 12 ಮೇ (ಹಿ.ಸ.) :
ಆ್ಯಂಕರ್ : ಮಕ್ಕಳ ಬಾಲ್ಯವನ್ನು ಸುಂದರಗೊಳಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು. ಅಂಕಗಳ ಸ್ಪರ್ಧೆಗೆ ಮಕ್ಕಳನ್ನು ಸಜ್ಜುಗೊಳಿಸುವ ಬದಲು ಅವರ ಬಾಲ್ಯವನ್ನು ಸಂತೋಷದಿಂದ ಕಳೆಯಲು ಒತ್ತಡಮುಕ್ತ ವಾತಾವರಣ ನಿರ್ಮಿಸುವುದು ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂ.ಎಸ್. ಹುಲ್ಲೂರ ಹೈಟೆಕ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ, ಸಹಬಾಳ್ವೆ ಹಾಗೂ ಸಹಸ್ಪಂದನೆ ಸಹಜವಾಗಿ ದೊರೆಯುತ್ತಿತ್ತು. ಆದರೆ ಇಂದಿನ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳು ಮನೆಯಲ್ಲಿ ಅನಾಥರಂತಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಕ್ಕಳು ಮೂಲತಃ ಪ್ರತಿಭಾವಂತರಾಗಿದ್ದು, ಅವರಿಗೆ ಸೂಕ್ತ ಅವಕಾಶ ಹಾಗೂ ವೇದಿಕೆಗಳನ್ನು ಕಲ್ಪಿಸಿಕೊಡುವುದು ಅಗತ್ಯವಾಗಿದೆ ಎಂದರು.
ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಾಹಿತ್ಯ, ಕಲೆ ಹಾಗೂ ಸಂಗೀತದ ಆಸಕ್ತಿ ಮುಖ್ಯವಾಗಿದೆ. ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಸಮ್ಮೇಳನದಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕಸಾಪ ಮಾಜಿ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಮಕ್ಕಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುತ್ತಿರುವ ಸಮ್ಮೇಳನ ಮಾದರಿಯ ಕಾರ್ಯಕ್ರಮವಾಗಿದೆ. ಬಾಲ್ಯದಲ್ಲಿಯೇ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅಗತ್ಯವೆಂದರು.
ಸಮ್ಮೇಳನಾಧ್ಯಕ್ಷ ತಯಬಅಲಿ ಹೊಂಬಳ ಮಾತನಾಡಿ, ಮಕ್ಕಳ ಸಾಹಿತ್ಯ ಕೃತಿಗಳನ್ನು ಸರ್ಕಾರ ನಿರಂತರವಾಗಿ ಖರೀದಿಸುವ ಪ್ರಕ್ರಿಯೆ ನಡೆಯಬೇಕು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಸಾಹಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸಿ ಗೌರವಿಸಬೇಕು ಎಂದು ಆಗ್ರಹಿಸಿದರು.
“ಮಕ್ಕಳ ಕ್ರಿಯಾಶೀಲತೆಗೆ ಅವಕಾಶ ಕಲ್ಪಿಸಿದರೆ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಅಂಕಗಳಿಗಿಂತ ಬಾಲ್ಯದ ಸಂತೋಷ ಮುಖ್ಯ. ಮಕ್ಕಳಿಗೆ ಒತ್ತಡಮುಕ್ತ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಎಸ್.ಎಸ್. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ತಯಬಅಲಿ ಹೊಂಬಳ ದಂಪತಿಗಳನ್ನು ಸನ್ಮಾನಿಸಲಾಯಿತು. ಸಮ್ಮೇಳನದ ವಿವಿಧ ವಿಭಾಗಗಳಲ್ಲಿ ಮಕ್ಕಳು ರಚಿಸಿದ ಕಥೆ ಹಾಗೂ ಕವಿತೆಗಳ ಕರಡು ಸಂಕಲನವನ್ನು ಲೋಕಾರ್ಪಣೆಗೊಳಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಾದ ಪ್ರವೀಣಕುಮಾರ ಸೊಬಗಿನ, ಪವಧ ತೊಂಡಿಹಾಳ, ತನುಶ್ರೀ ಬಡಿ, ಪ್ರಣತಿ ಆರ್. ಗಡಾದ, ಬಿ.ಬಿ. ನಾಗನೂರ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಂ.ಎಸ್. ಹುಲ್ಲೂರ, ಡಾ. ಶರಣಬಸವೇಶ ಆಲೂರ, ರತ್ನಕ್ಕ ಪಾಟೀಲ, ಸಂಜಯ ಬಾಗಮಾರ, ರಮಾಕಾಂತ ಕಮತಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ನೆಲಜೇರಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP