ಕೆಪಿಎಸ್ಸಿ ಮೇಲೆ ಯುವಕರ ನಂಬಿಕೆ ಕುಸಿದಿದೆ : ವಿಜಯೇಂದ್ರ
ಬೆಂಗಳೂರು, 11 ಮೇ (ಹಿ.ಸ.) : ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಅವರು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ವ್ಯವಸ್ಥೆ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು
Byv


ಬೆಂಗಳೂರು, 11 ಮೇ (ಹಿ.ಸ.) :

ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಅವರು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ವ್ಯವಸ್ಥೆ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ಅವರು, “ಒಮ್ಮೆ ಪ್ರತಿಭಾವಂತ ನಿರುದ್ಯೋಗಿಗಳ ಪಾಲಿಗೆ ಕಲ್ಪವೃಕ್ಷವಾಗಿದ್ದ ಕೆಪಿಎಸ್ಸಿ, ಇತ್ತೀಚಿನ ವರ್ಷಗಳಲ್ಲಿ ಅಕ್ರಮ, ಭ್ರಷ್ಟಾಚಾರ ಮತ್ತು ದೋಷಪೂರಿತ ಪ್ರಕ್ರಿಯೆಗಳ ಕಾರಣದಿಂದ ಲಕ್ಷಾಂತರ ಯುವಕರ ಭವಿಷ್ಯವನ್ನು ಅತಂತ್ರ ಸ್ಥಿತಿಗೆ ತಳ್ಳಿದೆ” ಎಂದು ಆರೋಪಿಸಿದ್ದಾರೆ.

ನಿರುದ್ಯೋಗಿ ಯುವಕರ ಭಾರಿ ಪ್ರತಿಭಟನೆಗೆ ಮಣಿದು ಸರ್ಕಾರ 56,432 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಘೋಷಿಸಿದೆ. ಆದರೆ ಈವರೆಗೆ ಅಧಿಸೂಚನೆ ಹೊರಡಿಸಿಲ್ಲ ಎಂದು ಅವರು ಟೀಕಿಸಿದ್ದಾರೆ.

ಸಂವಿಧಾನಬದ್ಧ ಸಂಸ್ಥೆಯಾದ ಕೆಪಿಎಸ್ಸಿ ಅರ್ಹ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಲು ವಿಫಲವಾಗಿದೆ. ಈ ಸಂಬಂಧ ನ್ಯಾಯಾಲಯಗಳ ಅನೇಕ ತೀರ್ಪುಗಳು ಆಯೋಗದ ವ್ಯವಸ್ಥೆಯಲ್ಲಿರುವ ಅಕ್ರಮಗಳನ್ನು ಬಯಲಿಗೆಳೆದಿವೆ. ಕೆಲವು ತಪ್ಪಿತಸ್ಥರ ಮುಖವಾಡವೂ ಕಳಚಿ ಬಿದ್ದಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

“ಆಯೋಗದಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ ಸುಧಾರಣೆ ತರಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಅದನ್ನು ನಂಬುವ ಮನಸ್ಥಿತಿಯನ್ನು ಉದ್ಯೋಗಾಕಾಂಕ್ಷಿಗಳು ಕಳೆದುಕೊಂಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೆಪಿಎಸ್ಸಿ ತನ್ನ ಅಸ್ತಿತ್ವವನ್ನೇ ಪ್ರಶ್ನಿಸುವ ಪರಿಸ್ಥಿತಿ ಬರಬಾರದೆಂದರೆ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ವಿಜಯೇಂದ್ರ, “56,432 ಹುದ್ದೆಗಳ ಭರ್ತಿಗೆ ವಿಳಂಬ ಮಾಡದೆ ತಕ್ಷಣ ಅಧಿಸೂಚನೆ ಹೊರಡಿಸಿ, ನ್ಯಾಯಯುತವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಈಗಾಗಲೇ ಹತಾಶೆಯ ಅಂಚಿನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳ ಆಕ್ರೋಶ ಸ್ಫೋಟಗೊಳ್ಳಲಿದೆ” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande