
ಗದಗ, 11 ಮೇ (ಹಿ.ಸ.) :
ಆ್ಯಂಕರ್ : ಗದಗ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಅವರು ಸೋಮವಾರ ಗದಗದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ಭೇಟಿ ನೀಡಿದರು.
ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
17 ಜನರಿಗೆ ಚಿಕಿತ್ಸೆ : ಇಬ್ಬರಿಗೆ ಹೆಚ್ಚಿನ ಆರೈಕೆ
ಅವಘಡದಲ್ಲಿ ಪ್ರಕರಣದಲ್ಲಿ ಒಟ್ಟು 17 ಜನರು ಗಾಯಗೊಂಡಿದ್ದು, ಎಲ್ಲರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಸಚಿವ ಎಚ್ ಕೆ ಪಾಟೀಲರು ತಿಳಿಸಿದರು.
ಹಿರಿಯ ವೈದ್ಯರು ಹಾಗೂ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. 17 ಜನರಲ್ಲಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ 16 ಮಂದಿಯಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ ಎಂದರು. ಇಬ್ಬರಿಗೆ ಹೆಚ್ಚಿನ ಆರೈಕೆ ಅಗತ್ಯವಿದ್ದು, ವೈದ್ಯರು ವಿಶೇಷ ನಿಗಾವಹಿಸಿದ್ದಾರೆ. ಸುಮಾರು 11 ಜನರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಉಳಿದವರು ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳಿಂದ ಚಿಕಿತ್ಸಾ ವೆಚ್ಚ ಮಂಜೂರು
ಘಟನೆಯ ಕುರಿತು ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಅಥವಾ ಗರಿಷ್ಠ 50 ಸಾವಿರ ರೂಪಾಯಿ ವರೆಗೆ ನೆರವು ನೀಡಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿಕಿತ್ಸಾ ವೆಚ್ಚ ಹೆಚ್ಚಾದಲ್ಲಿ ಸರ್ಕಾರದಿಂದ ಇನ್ನಷ್ಟು ನೆರವು ನೀಡುವ ಕುರಿತು ಸಹ ಚರ್ಚೆ ನಡೆದಿದೆ. ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಜಾತ್ರೆ ಆಯೋಜಕರ ಜವಾಬ್ದಾರಿ
ಜಾತ್ರೆಗಳಲ್ಲಿ ನಡೆಯುವ ಮನರಂಜನಾ ಆಟಗಳು ಹಾಗೂ ಇತರ ವ್ಯವಸ್ಥೆಗಳ ಗುತ್ತಿಗೆ ಪಡೆದವರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು. ಇಂತಹ ಅವಘಡಗಳು ಸಂಭವಿಸಿದಾಗ ಪೊಲೀಸರು ಹಾಗೂ ಸಂಬಂಧಿತ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದರು.
ಜಾತ್ರೆಯ ಅವಧಿ ಕುರಿತು ಸಮಿತಿ ನಿರ್ಧಾರ
ತೋಂಟದಾರ್ಯ ಮಠದ ಜಾತ್ರೆಯ ಅವಧಿಯನ್ನು ಸೀಮಿತಗೊಳಿಸುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ತೋಂಟದಾರ್ಯ ಮಠದ ಶ್ರೀಗಳು ಹಾಗೂ ಜಾತ್ರಾ ಸಮಿತಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿ ಎಂದು ಸಚಿವರು ಹೇಳಿದರು.
ಬಸ್ ತಂಗುದಾಣ ನಿರ್ಮಾಣ
ಕೆ ಎಚ್ ಪಾಟೀಲ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆಯ ಜಿಲ್ಲಾಸ್ಪತ್ರೆಗೆ ಬರುವ ಸಾರ್ವಜನಿಕರು ಹಾಗೂ ರೋಗಿಗಳ ಅನುಕೂಲಕ್ಕಾಗಿ ಶೀಘ್ರದಲ್ಲೇ ಆಸ್ಪತ್ರೆ ಆವರಣದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಲಕ್ಕುಂಡಿಯಲ್ಲಿ ಪುರಾತತ್ವ ಸಪ್ತಾಹಕ್ಕೆ ಉತ್ತಮ
ಸ್ಪಂದನೆ.
ಕಳೆದ ವಾರ ಲಕ್ಕುಂಡಿಯಲ್ಲಿ ಪುರಾತತ್ವ ಅವಶೇಷ ಸಪ್ತಾಹ ಆರಂಭಿಸಲಾಗಿದೆ. ಈ ವೇಳೆ ತಾವು ಹಾಗೂ ಶಾಸಕ ಸಿ ಸಿ ಪಾಟೀಲರು ಮಾತನಾಡಿದಂತೆ ಈಗಾಗಲೇ 1300ಕ್ಕೂ ಹೆಚ್ಚು ಪುರಾತತ್ವ ಅವಶೇಷಗಳನ್ನು ಗುರುತಿಸಿ ಬಯಲಿಗೆ ತರುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ರಾಷ್ಟ್ರಕೂಟ–ಹೊಯ್ಸಳರ ಕಾಲದ ಅವಶೇಷಗಳು ಪತ್ತೆ.
ಲಕ್ಕುಂಡಿಯಲ್ಲಿ ರಾಷ್ಟ್ರಕೂಟರು ಹಾಗೂ ಹೊಯ್ಸಳರ ಕಾಲಕ್ಕೆ ಸೇರಿದ ಅಮೂಲ್ಯ ಶಿಲ್ಪಗಳು ಹಾಗೂ ಪುರಾತತ್ವ ಅವಶೇಷಗಳು ದೊರೆತಿವೆ. ದೇಶದಲ್ಲಿಯೇ ಅತ್ಯುತ್ತಮ ಪುರಾತತ್ವ ಸಂಪತ್ತನ್ನು ಹೊಂದಿರುವ ತಾಣಗಳಲ್ಲಿ ಲಕ್ಕುಂಡಿ ಪ್ರಮುಖ ಸ್ಥಾನ ಪಡೆದಿದೆ ಎಂದು ಸಚಿವರು ಹೇಳಿದರು.
ಲಕ್ಕುಂಡಿಯಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ಖನನ ಕಾರ್ಯ ಆರಂಭಿಸಲಾಗಿದೆ. ಇದು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಪ್ರದೇಶವಾಗಿದ್ದು, ಸರ್ಕಾರ ಯೋಜಿತ ರೀತಿಯಲ್ಲಿ ಕಾರ್ಯ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.
ಮಾಧ್ಯಮ ಮತ್ತು ಸಾರ್ವಜನಿಕರ ಸಹಕಾರಕ್ಕೆ ಮೆಚ್ಚುಗೆ.
ಮಾಧ್ಯಮಗಳು ಈ ಕಾರ್ಯವನ್ನು ಉತ್ತಮವಾಗಿ ಬೆಳಕಿಗೆ ತರುತ್ತಿದ್ದು, ಲಕ್ಕುಂಡಿ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಎಲ್ಲಿಯೇ ಪುರಾತತ್ವ ಅವಶೇಷಗಳು ದೊರೆತರೂ ಜನರು ಅವನ್ನು ಸರ್ಕಾರ ಹಾಗೂ ಪುರಾತತ್ವ ಪ್ರಾಧಿಕಾರಕ್ಕೆ ಒಪ್ಪಿಸುವ ಮೂಲಕ ದೊಡ್ಡತನ ಮೆರೆದಿದ್ದಾರೆ ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಅಧ್ಯಕ್ಷ ಬಿ ಬಿ ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಎಸ್.ಎನ್. ಬಳ್ಳಾರಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಿವೈಎಸ್ಪಿ ಮುರ್ತುಜಾ ಖಾದ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ದಿವಂಗತ ಡಿ. ಸುಧಾಕರ್ ಅಗಲಿಕೆಗೆ ಸಚಿವರ ಸಂತಾಪ
ಗದಗ : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಡಿ. ಸುಧಾಕರ ಅವರ ಅಗಲಿಕೆಯನ್ನು ಸ್ಮರಿಸಿದ ಸಚಿವ ಎಚ್ ಕೆ ಪಾಟೀಲರು ಸಂತಾಪ ವ್ಯಕ್ತಪಡಿಸಿದರು.
ಡಿ. ಸುಧಾಕರ್ ಅವರ ನಿಧನ ಮಧ್ಯ ಕರ್ನಾಟಕ ಭಾಗಕ್ಕೆ ಅಪಾರ ನಷ್ಟ ಉಂಟುಮಾಡಿದೆ. ಅವರು ಸರಳತೆ, ಸೌಜನ್ಯ ಮತ್ತು ಜನಪರ ಮನೋಭಾವದಿಂದ ಜನರ ಮನಸ್ಸು ಗೆದ್ದಿದ್ದ ನಾಯಕರು. ರಾಜಕೀಯ ಜೀವನದಲ್ಲಿ ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಅವರು ಅಭಿವೃದ್ಧಿ ಕಾರ್ಯಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದು ಹೇಳಿದರು.
ಸಾರ್ವಜನಿಕ ಬದುಕಿನಲ್ಲಿ ಶಿಸ್ತು, ನಿಷ್ಠೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿದ ಅವರು ಎಲ್ಲ ವರ್ಗದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದ ಅವರು, ರೈತರು, ಬಡವರು ಹಾಗೂ ಸಾಮಾನ್ಯ ಜನರ ಪರ ಧ್ವನಿಯಾಗಿದ್ದರು. ಅವರ ಅಗಲಿಕೆಯಿಂದ ರಾಜ್ಯ ಒಬ್ಬ ಧೀಮಂತ ಹಾಗೂ ಅನುಭವ ಸಂಪನ್ನ ನಾಯಕನನ್ನು ಕಳೆದುಕೊಂಡಿದೆ ಎಂದು ಸಚಿವರು ಹೇಳಿದರು.
ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಚಿವ ಎಚ್ ಕೆ ಪಾಟೀಲರು ಸಂತಾಪ ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP