
ಗದಗ, 11 ಮೇ (ಹಿ.ಸ.) :
ಆ್ಯಂಕರ್ : ರೈತರು ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಭೂಮಿ ತಾಯಿಯನ್ನು ರಕ್ಷಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹೇಳಿದರು.
ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ “ಧರ್ತಿ ಮಾತಾ ಬಚಾವೋ ಅಭಿಯಾನ” ಹಾಗೂ ಭೂ ಸಂಪನ್ಮೂಲ ಸಮೀಕ್ಷೆ ಸಾಕ್ಷರತಾ ಅಭಿಯಾನದ ಅಂಗವಾಗಿ ನಡೆದ ಭೂ ಮಾತೆಯ ರಕ್ಷಣಾ ಕಣ್ಣಾವಲು ಸಭೆಯಲ್ಲಿ ಅವರು ಮಾತನಾಡಿದರು.
ಅತಿಯಾದ ಯೂರಿಯಾ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿ ರೈತರಿಗೆ ‘ಯೂರಿಯಾ’ ತಂತ್ರಾಂಶದ ಮೂಲಕ ನಿಗದಿತ ಪ್ರಮಾಣದಲ್ಲಿ ಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ರೈತರು ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಮತೋಲನ ಗೊಬ್ಬರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯಿಂದ ದೊರೆಯುವ ಪಿಎಂಎಫ್ಎಂಇ ಯೋಜನೆಯ ಸೌಲಭ್ಯಗಳನ್ನು ರೈತರು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಕೃಷಿಹೊಂಡಗಳ ಸುತ್ತ ಸುರಕ್ಷಿತ ತಂತಿಬೇಲಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಪೂರಕವಾಗುವ ಸೆಣಬಿನ ಬೀಜ, ರೈಜೋಬಿಯಂ, ಟ್ರೈಕೊಡರ್ಮಾ ಸೇರಿದಂತೆ ಜೈವಿಕ ಪೀಡೆನಾಶಕಗಳನ್ನು ಇಲಾಖೆಯಿಂದ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ರೈತರು ಪಡೆದು ಬಳಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಜಣ್ಣ ಶಿವಶಿಂಪರ, ಚಂದ್ರಶೇಖರಗೌಡ ಪಾಟೀಲ, ಬಿ.ಆರ್. ಪಾಲಾಕ್ಷಗೌಡ, ಎಸ್.ಎಫ್. ತಹಶೀಲ್ದಾರ, ಬಸವರಾಜ ಗದಗಿನ, ಬಸವರಾಜ ತಳವಾರ, ಹೆಚ್.ಟಿ. ದ್ವಾಸಲ, ಮಲ್ಲಯ್ಯ ಶಿವಪೂಜೆ, ಬಾಬು ರಾಜೂರು, ಸಿದ್ದು ಸೋಲಗಿ, ಅನ್ನಪೂರ್ಣ, ಶಿಲ್ಪಾ ಕಟಗೇರಿ, ಬಸವರಾಜ ಹಡಪದ, ಬಸಮ್ಮ ತೆಗ್ಗಿನಕೇರಿ, ರಿವಾರ್ಡ್ ಯೋಜನೆ ಸಿಬ್ಬಂದಿ, ವೈದ್ಯರು ಹಾಗೂ ರೈತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP