
ಗದಗ, 11 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಪವರ್ ಶೇರಿಂಗ್ ವಿಚಾರವಾಗಿ ನೀಡಿದ ಹೇಳಿಕೆಗೆ ಸಚಿವ ಎಚ್ ಕೆ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೋದಿ ಅವರ ರಾಜಕೀಯ ಹುಡುಗಾಟದ ಮಾತುಗಳು ತೀವ್ರ ಖಂಡನಾರ್ಹ” ಎಂದು ವಾಗ್ದಾಳಿ ನಡೆಸಿದರು.
“ಪ್ರಧಾನಿ ಮೋದಿ ಅವರು ಧಾರ್ಮಿಕ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆದರೆ ಮತ್ತೊಂದು ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದು ಪ್ರಧಾನಿಯವರ ಘನತೆಗೆ ತಕ್ಕದ್ದಲ್ಲ” ಎಂದು ಹೇಳಿದರು.
“ವಿಜಯೇಂದ್ರ ಮಾತನಾಡಬೇಕಾದ ವಿಚಾರವನ್ನು ದೇಶದ ಪ್ರಧಾನಿ ಮಾತನಾಡುತ್ತಿದ್ದಾರೆ. ಇದರಿಂದ ಅವರು ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂಬುದು ಗೊತ್ತಾಗುತ್ತದೆ” ಎಂದು ಟೀಕಿಸಿದ ಸಚಿವರು, “ಸಿದ್ದರಾಮಯ್ಯ ಅವರ ಬಗ್ಗೆ ನಿಮಗೆ ಅಷ್ಟೊಂದು ಗಾಬರಿ ಯಾಕೆ? ನಮ್ಮ ಪಕ್ಷದಲ್ಲಿ ಬದಲಾವಣೆ ಮಾಡುತ್ತೇವೆ ಎಂದು ಯಾರಾದರೂ ನಾಯಕರು ಅಥವಾ ಶಾಸಕರು ನಿಮಗೆ ಹೇಳಿದ್ದಾರೆನಾ?” ಎಂದು ಪ್ರಶ್ನಿಸಿದರು.
“ಲಘು ರಾಜಕೀಯ ಮಾತುಗಳ ಮೂಲಕ ಪ್ರಧಾನಿ ತಮ್ಮ ಘನತೆ ಮತ್ತು ಗಾಂಭೀರ್ಯ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದ ನಾಯಕತ್ವದ ಬಗ್ಗೆ ಮಾತನಾಡುವುದು ಅವರ ಕೆಲಸವಲ್ಲ” ಎಂದು ಕಿಡಿಕಾರಿದರು.
ನರೇಗಾ ಯೋಜನೆ ಬಗ್ಗೆ ಅಸಮಾಧಾನ
ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ವಿ.ಬಿ.ಜಿ. ರಾಮ್.ಜಿ ಇನ್ನೂ ನೋಟಿಫೈ ಆಗಿಲ್ಲ. ಅದಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಜನರು ಕೂಲಿ ಕೆಲಸ ಕೇಳುತ್ತಿದ್ದಾರೆ. ಆದರೆ ಏನು ಕೆಲಸ ಕೊಡಬೇಕು ಎಂಬ ಸ್ಪಷ್ಟತೆ ಇಲ್ಲ” ಎಂದರು.
“ನರೇಗಾ ಯೋಜನೆಯನ್ನು ಮುಚ್ಚಿಹಾಕಿದಂತಾಗಿದೆ. ಮುಂದೆ ಏನು ಎಂಬುದರ ಬಗ್ಗೆ ಯಾವುದೇ ಪರಿಹಾರವಿಲ್ಲ. ಜನರ ಬದುಕಿನ ಬಗ್ಗೆ ಮಾತನಾಡಬೇಕಾದವರು ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಈ ರೀತಿಯ ಮಾತುಗಳನ್ನು ಈ ಹಿಂದೆ ಯಾರೂ ಆಡಿರಲಿಲ್ಲ” ಎಂದು ಹೇಳಿದರು.
“ಮೋದಿ ಸಂದೇಶ ಜನರಲ್ಲಿ ಭಯ ಮೂಡಿಸಿದೆ”
ಇತ್ತೀಚೆಗೆ ಪ್ರಧಾನಿ ಮೋದಿ ನೀಡಿದ ಸಾರ್ವಜನಿಕ ಸಂದೇಶದ ಬಗ್ಗೆ ಮಾತನಾಡಿದ ಎಚ್.ಕೆ. ಪಾಟೀಲ, “ಮೋದಿ ನೀಡಿದ ಸಂದೇಶ ಜನರಲ್ಲಿ ಭಯ ಮೂಡಿಸುವಂಥ ವಾರ್ನಿಂಗ್ ಆಗಿದೆ” ಎಂದು ಅಭಿಪ್ರಾಯಪಟ್ಟರು.
“ಈ ವಿಷಯವನ್ನು ಪಾರ್ಲಿಮೆಂಟ್ನಲ್ಲಿ ಚರ್ಚೆ ಮಾಡಬೇಕಿತ್ತು. ಯಾವ ಹಿನ್ನಲೆಯಲ್ಲಿ, ಯಾವ ಕಾರಣಕ್ಕೆ ಈ ಸಂದೇಶ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ದೇಶ ಗಂಭೀರ ಸನ್ನಿವೇಶ ಎದುರಿಸುತ್ತಿದೆ ಎಂಬ ಅರ್ಥ ಜನರಲ್ಲಿ ಮೂಡಿದೆ” ಎಂದು ಹೇಳಿದರು.
“ವಿದೇಶ ಪ್ರಯಾಣ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಪ್ರಧಾನಿ ಹೇಳಿದ್ದಾರೆ. ಹಾಗಾದರೆ ದೇಶದಲ್ಲಿ ಏನು ಪರಿಸ್ಥಿತಿ ಇದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದರು.
“ಫ್ಲೈಟ್ ಹಾರಾಟ ಕಡಿಮೆ ಮಾಡಬೇಕಲ್ಲವಾ? ಕೊರೋನಾ ಸಂದರ್ಭದಲ್ಲಿದ್ದಂತೆ ವರ್ಚುವಲ್ ಮೀಟಿಂಗ್, ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಬೇಕು. ಪ್ರಧಾನಿ ಸಾರ್ವಜನಿಕ ಸಂದೇಶ ನೀಡಿದರೆ ಅದರ ಅನುಸರಣೆಗಾಗಿ ವಿಶೇಷ ಮಾರ್ಗಸೂಚಿಯೂ ಬರಬೇಕು” ಎಂದು ಹೇಳಿದರು.
“ಅಂತಹ ಸನ್ನಿವೇಶ ದೇಶದಲ್ಲಿ ಎಲ್ಲೂ ಗೋಚರಿಸುತ್ತಿಲ್ಲ. ಹಾಗಿದ್ದರೆ ಯಾರು ಅಸಹಕಾರ ಮಾಡುತ್ತಿದ್ದಾರೆ? ಇರಾನ್, ಇರಾಕ್ ಅಥವಾ ಅಮೇರಿಕಾ ದೇಶಗಳ ಬೆಳವಣಿಗೆಯೇ ಕಾರಣವೇ? ಏನು ನಡೆಯುತ್ತಿದೆ ಎಂಬುದನ್ನು ಪ್ರಧಾನಿ ದೇಶದ ಜನತೆಗೆ ಸ್ಪಷ್ಟವಾಗಿ ಹೇಳಬೇಕು” ಎಂದು ಒತ್ತಾಯಿಸಿದರು.
“ಮುಂದೇನು ಆಗುತ್ತದೋ ಎಂಬ ಆತಂಕ ಜನರಲ್ಲಿ ಮೂಡಿದೆ. ಆದ್ದರಿಂದ ಕೇಂದ್ರ ಸರ್ಕಾರ ದೇಶ ಎದುರಿಸುತ್ತಿರುವ ಸನ್ನಿವೇಶದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು” ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / lalita MP