
ರಾಯಚೂರು, 11 ಮೇ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013 ರಡಿ ಮೇ 2026 ಮತ್ತು ಜೂನ್ 2026 ರ ಮಾಹೆಯ ಆಹಾರ ಧಾನ್ಯಗಳನ್ನು ಮೇ 2026 ರ ಮಾಹೆಯಲ್ಲಿಯೇ ವಿತರಣೆ ಮಾಡಲು ಸರ್ಕಾರವು ನಿರ್ದೇಶಿಸಿರುವ ಹಿನ್ನಲೆಯಲ್ಲಿ ಮೇ 2026 ರ ಮಾಹೆಯಲ್ಲಿ ರಾಯಚೂರು ಜಿಲ್ಲೆಯ ಕೇಂದ್ರ ವ್ಯಾಪ್ತಿಯ ಪ್ರತಿ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 70 ಕೆ.ಜಿ ಅಕ್ಕಿ ಹಾಗೂ ಕೇಂದ್ರ ಮತ್ತು ರಾಜ್ಯ ವ್ಯಾಪ್ತಿಯ ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ನಜೀರ್ ಅಹ್ಮದ್ ಅವರು ತಿಳಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ 06 ರಿಂದ ರಾತ್ರಿ 10ಗಂಟೆಯವರೆಗೆ ನ್ಯಾಯ ಬೆಲೆ ಅಂಗಡಿಯಲ್ಲಿ ಸರ್ವರ್ ಲಭ್ಯಗೊಳಿಸಿರುವುದರಿಂದ ಪಡಿತರ ಚೀಟಿದಾರರು ಸದರಿ ಸಮಯವನ್ನು ಸದ್ಬಳಕೆಪಡಿಸಿಕೊಂಡು ಸಂಬ0ಧ ಪಟ್ಟ ನ್ಯಾಯ ಬೆಲೆ ಅಂಗಡಿಯ ಮುಖಾಂತರ ಪಡಿತರ ಪಡೆಯುವ ಸಮಯದಲ್ಲಿ 02 ಬಾರಿ ಬಯೋಮೆಟ್ರಿಕ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಮತ್ತು ಅನ್ನಸುವಿಧಾ ಯೋಜನೆಯ ಪಡಿತರ ಫಲಾನುಭವಿಗಳು ಮೇ ಮತ್ತು ಜೂನ್ 2026 ರ ಮಾಹೆಯಲ್ಲಿ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ 02 ಬಾರಿ ಬಯೋಮೆಟ್ರಿಕ್ ನೀಡಿ ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ಪಡಿತರ ಚೀಟಿದಾರರು ಕೇವಲ ಒಂದೇ ಬಾರಿ ಬಯೋಮೆಟ್ರಿಕ್ ನೀಡಿದ್ದಲ್ಲಿ ಸದರಿ ಯೋಜನೆಯಡಿ ಜೂನ್ 2026 ರ ಮಾಹೆಗೆ ಹಂಚಿಕೆಯಾದ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗುವುದಿಲ್ಲ ಮತ್ತು ಸದರಿ ಮಾಹೆಯ ಆಹಾರ ಧಾನ್ಯಗಳು ವ್ಯಪಗತವಾಗುತ್ತದೆ. ಪ್ರಯುಕ್ತ ಮೇ 2026 ರ ಮಾಹೆಯಲ್ಲಿ ದಿನಾಂಕ: 31.05.2026 ರೊಳಗಾಗಿ 02 ಬಾರಿ ಬಯೋಮೆಟ್ರಿಕ್ ನೀಡಿ ಪಡಿತರವನ್ನು ಪಡೆದುಕೊಳ್ಳಬಹುದಾಗಿದೆ.
ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಅಂತರ್ ರಾಜ್ಯ/ ಅಂತರ್ ಜಿಲ್ಲೆ) ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ವರ್ಗದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದ್ದಲ್ಲಿ ಮತ್ತು ಇತರೆ ದೂರುಗಳಿಗೆ ನಿಶುಲ್ಕ ದೂರವಾಣಿ ಸಂಖ್ಯೆ 1967ಗೆ ಹಾಗೂ ತಾಲ್ಲೂಕಿನಲ್ಲಿರುವ ತಹಶೀಲ್ದಾರರ ಕಛೇರಿಗೆ ಅಥವಾ ಜಿಲ್ಲೆಯ ಉಪನಿದೇರ್ಶಕರ ಕಛೇರಿಗೆ ದೂರನ್ನು ಸಲ್ಲಿಸಬಹುದಾಗಿದೆ.
ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬ0ದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಲಾಗುವುದು ಮತ್ತು ಸದರಿ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹ್ಮದ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್