
ವಿಜಯಪುರ, 11 ಮೇ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿರುವ ಕೆಇಬಿ ಇಲಾಖೆಯ ಕಟ್ಟಡದ ಮಹಡಿಯ ಮೇಲಿಂದ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ ಕೆಇಬಿ ನೌಕರ ಮುತ್ತಪ್ಪ ಡಾಂಗೆ ಅವರ ನಿಧನವು ಸಾರ್ವಜನಿಕರಲ್ಲಿ ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ದುಡಿಯುವ ಮನೋಭಾವ ಹಾಗೂ ಸರಳ ವ್ಯಕ್ತಿತ್ವದಿಂದ ಎಲ್ಲರ ಮನ ಗೆದ್ದಿದ್ದ ಮುತ್ತಪ್ಪ ಡಾಂಗೆ ಅವರ ಅಕಾಲಿಕ ಸಾವು ಕುಟುಂಬದವರಷ್ಟೇ ಅಲ್ಲದೆ ಗ್ರಾಮಸ್ಥರನ್ನೂ ಕಂಬನಿ ಮಿಡಿಯುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಇಂದು ತಾಲೂಕಿನ ಹಂದಿಗನೂರ ಗ್ರಾಮದ ಮೃತ ಮುತ್ತಪ್ಪ ಡಾಂಗೆ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕಅಶೋಕ್ ಮನಗೂಳಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಕುಟುಂಬದ ಸದಸ್ಯರ ನೋವನ್ನು ಆಲಿಸಿದ ಅವರು, ಇಂತಹ ದುರ್ಘಟನೆ ಸಂಭವಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಮುತ್ತಪ್ಪ ಡಾಂಗೆ ಅವರು ತಮ್ಮ ಕರ್ತವ್ಯನಿಷ್ಠೆ, ಸರಳತೆ ಹಾಗೂ ಸಹೃದಯತೆಯಿಂದ ಎಲ್ಲರ ಪ್ರೀತಿ ಗಳಿಸಿದ್ದ ವ್ಯಕ್ತಿಯಾಗಿದ್ದು, ಅವರ ನಿಧನದಿಂದ ಕುಟುಂಬಕ್ಕೆ ಮಾತ್ರವಲ್ಲದೆ ಸಮಾಜಕ್ಕೂ ಅಪಾರ ನಷ್ಟ ಉಂಟಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಕುಟುಂಬದವರಿಗೆ ಧೈರ್ಯ ತುಂಬಿದ ಅವರು, ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಮುತ್ತಮ್ಮ ಡಾಂಗೆ, ಇಬ್ಬರು ಮಕ್ಕಳು, ತಂದೆ ಹಣಮಂತ ಡಾಂಗೆ, ತಾಯಿ ರೇಣುಕಾ ಡಾಂಗೆ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಮುಖಂಡರಾದ ಶಿವಾನಂದ ವಾಲಿ, ಸಿದ್ದನಗೌಡ ಬಿರಾದಾರ, ಅರವಿಂದ ದೇಸಾಯಿ, ಸಲೀಮ್ ಕಣ್ಣಿ, ಶ್ರೀನಾಥ ಬಿರಾದಾರ, ಮಡು ರೋಡಗಿ, ಸೋಮನಗೌಡ ಬಿರಾದಾರ ಹಾಗೂ ಗ್ರಾಮಸ್ಥರು ಭಾಗವಹಿಸಿ ಸಂತಾಪ ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande