
ವಿಜಯಪುರ, 11 ಮೇ (ಹಿ.ಸ.) :
ಆಂಕರ್ : ಲೋಕೋಪಯೋಗಿ ಇಲಾಖೆ ವಿಜಯಪುರ ಹಾಗೂ ಕೆ.ಆರ್.ಐ.ಡಿ.ಎಲ್ ಇಲಾಖೆ ಇಂಡಿ ಇವರ ಜಂಟಿ ಆಶ್ರಯದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ
ಪೂಜೆಯನ್ನು ಶಾಸಕ ಯಶವಂತರಾಯಗೌಡ ಪಟೇಲ್ ನೆರವೇರಿಸಿದರು.
ಒಟ್ಟು ಸುಮಾರು ₹42.5 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ.
ಗ್ರಾಮದ ಧಾರ್ಮಿಕ, ಸಾಮಾಜಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶ್ರೀ ಮರಗಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಸುಮಾರು ₹5 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಯಿತು. ಅದೇ ರೀತಿ ಸಾಲೋಟಗಿ ದರ್ಗಾ ಸಮೀಪ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ₹2.5 ಲಕ್ಷ ಅನುದಾನದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮದ ಪ್ರಮುಖ ಅಗತ್ಯವಾಗಿದ್ದ ಖಬರಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸುಮಾರು ₹10 ಲಕ್ಷ ವೆಚ್ಚ ಮೀಸಲಿಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರ ಸೌಲಭ್ಯ ಕಲ್ಪಿಸಲಾಗುತ್ತದೆ. ಜೊತೆಗೆ ಶ್ರೀ ಸಿದ್ದೇಶ್ವರ ಗುರು ಆಶ್ರಮದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೂ ಸುಮಾರು ₹10 ಲಕ್ಷ ವೆಚ್ಚದಲ್ಲಿ ಚಾಲನೆ ನೀಡಲಾಯಿತು.
ಎಸ್.ಸಿ. ಕಾಲೊನಿಯ ಹಳ್ಳದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸುಮಾರು ₹5 ಲಕ್ಷ ವೆಚ್ಚ ನಿಗದಿಪಡಿಸಲಾಗಿದ್ದು, ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶ ಹೊಂದಿದೆ. ಅಲ್ಲದೆ ಶ್ರೀ ಏಳು ಮಕ್ಕಳ ತಾಯಿ (ಸೀತಳಾ) ದೇವಸ್ಥಾನದ ಅಭಿವೃದ್ಧಿಗೆ ₹5 ಲಕ್ಷ ಹಾಗೂ ಶ್ರೀ ಹನುಮಾನ ದೇವಸ್ಥಾನದ ಅಭಿವೃದ್ಧಿಗೆ ₹5 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮೂಲಸೌಕರ್ಯ ಮತ್ತು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಜನರಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು, ಗ್ರಾಮದ ಹಿರಿಯರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಅಭಿವೃದ್ಧಿ ಕಾರ್ಯಗಳಿಗೆ ಶುಭ ಹಾರೈಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande