
ಕೋಲಾರ, ೧೧ ಮೇ (ಹಿ.ಸ) :
ಆ್ಯಂಕರ್ : ನಿಮ್ಮ ಬದುಕು ರೂಪಿಸಿಕೊಳ್ಳಲು ಪರೀಕ್ಷೆಯಲ್ಲಿ ಅಂಕ ಗಳಿಸುವುದು ಎಷ್ಟು ಮುಖ್ಯವೋ ಜೀವನದಲ್ಲಿ ಮೌಲ್ಯಗಳನ್ನು ಉಳಿಸಿಕೊಂಡು ಮುಂದುವರೆದು ಸಮಾಜ,ದೇಶಕ್ಕೆ ಆಸ್ತಿಯಾಗುವುದು ಅಷ್ಟೇ ಮುಖ್ಯ ಎಂದು ಪೊಲೀಸ್ ಉಪ ಮಹಾನಿರೀಕ್ಷಕ ಡಿಐಜಿಪಿ ಡಿ.ದೇವರಾಜ್ ಕರೆ ನೀಡಿದರು.
ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಜಿಲ್ಲೆಯ ಕೋಲಾರ, ಮುಳಬಾಗಿಲು, ಬಂಗಾರಪೇಟೆ ಮತ್ತಿತರ ತಾಲ್ಲೂಕುಗಳಲ್ಲಿ ಸ್ಥಾಪಿತವಾಗಿರುವ ಎಸ್ಡಿಸಿ ಶಿಕ್ಷಣ ಸಂಸ್ಥೆಗಳಲ್ಲಿ ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಅಂಕಗಳನ್ನು ಪಡೆದು ಉತ್ತಮ ಸಾಧನೆಗೈದ ೪೬೫ ವಿದ್ಯಾರ್ಥಿಗಳನ್ನು ನಗರದ ಆರ್. ಆರ್. ಕನ್ವೆನ್ಷನ್ ಹಾಲ್ನಲ್ಲಿ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಬೆಳವಣಿಗೆಯ ಜೊತೆ ಜೊತೆಗೆ ಜೀವನ ಮೌಲ್ಯಗಳು ಹಾಗೂ ಕೌಶಲ್ಯಗಳ ಕಡೆಗೆ ಗಮನಹರಿಸುವಂತೆ ಮಾರ್ಗದರ್ಶನ ನೀಡಿ, ನಿಮ್ಮನ್ನು ಬೆಳೆಸಿದ ಪೋಷಕರಿಗೆ ದ್ರೋಹ ಮಾಡದೇ ಅವರ ಆಶೀರ್ವಾದದಿಂದಲೇ ಮುನ್ನಡೆಯಿರಿ. ಶಿಕ್ಷಣ ನಿಮಗೆ ಪದವಿ ನೀಡಬಹುದು ಆದರೆ ನೀವು ಅದರೊಂದಿಗೆ ಬದುಕಿನ ಶಿಕ್ಷಣ ಕಲಿಯಬೇಕು ಎಂದ ಅವರು, ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗುವ ಮತ್ತು ಪೊಲೀಸ್ ಇಲಾಖೆ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾತ್ರವಲ್ಲ ಎಲ್ಲೇ ಮಾದಕದ್ರವ್ಯ ಮಾರಾಟ ಜಾಲ ಕಂಡು ಬಂದರೆ ಅತಿ ಎಚ್ಚರಿಕೆಯಿಂದ ಅಂತಹ ದುಷ್ಟರನ್ನು ಮಟ್ಟಹಾಕುವ ಕೆಲಸ ಮಾಡುತ್ತಿದೆ, ಮಾದಕ ಮುಕ್ತ ಕರ್ನಾಟಕ ಮಾಡಲು ವಿದ್ಯಾರ್ಥಿಗಳು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷರಾದ ಪಲ್ಲವಿ ಮಣಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಉತ್ತಮ ಚಾರಿತ್ರ÷್ಯವನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ, ಅದು ದಾರಿ ತೋರಬೇಕೇ ಹೊರತೂ ದಾರಿ ತಪ್ಪಿಸಬಾರದು ಎಂದ ಅವರು, ಶೈಕ್ಷಣಿಕವಾಗಿ ನೀವು ಮುನ್ನಡೆಯಿರಿ, ಮೆಡಿಕಲ್, ಇಂಜಿನಿಯರಿ0ಗ್ ಮಾತ್ರವಲ್ಲ ಐಎಎಸ್,ಐಪಿಎಸ್ನಂತಹ ಉನ್ನತ ಸಾಧನೆಯ ಕಡೆಗೂ ಗಮನ ನೀಡಿ, ನಿಮಗಾಗಿ ಕೋಲಾರದಲ್ಲಿ ಡಿಐಜಿಪಿ ದೇವರಾಜ್ ಅವರು ಉಚಿತ ಕೋಚಿಂಗ್ ಕೇಂದ್ರ ಆರಂಭಿಸಿ ನೆರವಾಗಿದ್ದಾರೆ ಎಂದರು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಎಸ್.ಡಿ.ಸಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಉಷಾ ಗಂಗಾಧರ, ಸಂಸ್ಥೆಯ ಎಲ್ಲಾ ಶಾಖೆಗಳ ಅಭೂತಪೂರ್ವ ಸಾಧನೆ ಹಾಗೂ ಯಶಸ್ಸನ್ನು ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ಅರ್ಪಿಸಿದರು.
ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ತಮ್ಮ ಮಕ್ಕಳನ್ನು ಎಸ್ಡಿಸಿ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಸಿದ ಎಲ್ಲಾ ಪೋಷಕರಿಗೆ ಧನ್ಯವಾದಗಳನ್ನು ತಿಳಿಸಿದ ಅವರು, ನಮ್ಮ ಗುರಿ ಶೈಕ್ಷಣಿಕ ಸಾಧನೆಯೇ ಆಗಿದೆ, ಕೋಲಾರ,ಬಂಗಾರಪೇಟೆ, ಮುಳಬಾಗಿಲು ಮತ್ತಿತರ ನಮ್ಮ ಶಾಖೆಗಳಲ್ಲಿ ಈ ಬಾರಿಯೂ ಪ್ರತಿವರ್ಷದಂತೆ ಉತ್ತಮ ಫಲಿತಾಂಶ ಬಂದಿದೆ ಎಂದ ಅವರು, ಈ ಸಾಧನೆಗೆ ಅನೇಕ ಉಪನ್ಯಾಸಕರು ಶ್ರಮಿಸಿದ್ದಾರೆ ಎಂದರು.
ಅಭಿನ0ದನ ಕಾರ್ಯಕ್ರಮದಲ್ಲಿ ಎಸ್.ಡಿ.ಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಂಗಾಧರ, ಖಜಾಂಚಿ ತ್ರಿಶೂಲ್, ಎಲ್ಲಾ ಶಾಖೆಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್