
ಬಾಗಲಕೋಟೆ, 11 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರದ ನವನಗರ ಸೆಕ್ಟರ್ ನಂ.34ರ ಪೊಲೀಸ್ ಟ್ರೇನಿಂಗ್ ಶಾಲೆ ಮುಂಭಾಗದ ರಸ್ತೆಯಲ್ಲಿ ಚರಂಡಿ ಸ್ವಚ್ಛತಾ ಕಾಮಗಾರಿ ನಡೆಸಿದ ಬಳಿಕ ತೆಗೆದ ಕಸವನ್ನು ತೆರವುಗೊಳಿಸದೆ ಹಲವು ದಿನಗಳಿಂದ ಹಾಗೆಯೇ ಬಿಟ್ಟಿರುವುದರಿಂದ ಸ್ಥಳೀಯರು ಹಾಗೂ ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 5-6 ದಿನಗಳ ಹಿಂದೆ ನಗರಸಭೆ ಸಿಬ್ಬಂದಿ ಚರಂಡಿಯಲ್ಲಿನ ಕಸ ಮತ್ತು ಮಣ್ಣನ್ನು ಹೊರತೆಗೆದಿದ್ದರು. ಆದರೆ ಆ ಕಸವನ್ನು ತಕ್ಷಣ ಸಾಗಿಸದೆ ರಸ್ತೆ ಬದಿಯಲ್ಲೇ ಬಿಟ್ಟಿರುವುದರಿಂದ ಅಂಗಡಿಗಳ ಮುಂದೆ ದುರ್ವಾಸನೆ ವ್ಯಾಪಿಸಿದೆ. ಇದರಿಂದ ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ರಸ್ತೆ ಸಂಚಾರಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ವಿಶೇಷವಾಗಿ ಮಧ್ಯಾಹ್ನ ಸಮಯದಲ್ಲಿ ದುರ್ವಾಸನೆ ಹೆಚ್ಚಾಗುತ್ತಿದ್ದು, ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ. ಮಳೆಯಾದರೆ ಈ ಕಸ ಮತ್ತೆ ಚರಂಡಿಯೊಳಗೆ ಸೇರಿ ನೀರು ಸರಾಗವಾಗಿ ಹರಿಯುವುದಕ್ಕೂ ಅಡ್ಡಿಯಾಗುವ ಭೀತಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚರಂಡಿಯಲ್ಲಿನ ಕೊಳಚೆ ಹಾಗೂ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಬಿಟ್ಟಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚುವ ಸಾಧ್ಯತೆ ಇದ್ದು, ಆರೋಗ್ಯ ಸಮಸ್ಯೆಗಳು ಉಂಟಾಗುವ ಆತಂಕ ಕೂಡ ಸಾರ್ವಜನಿಕರಲ್ಲಿ ಮನೆಮಾಡಿದೆ. ಶಾಲೆ ಮತ್ತು ವಸತಿ ಪ್ರದೇಶ ಸಮೀಪದಲ್ಲೇ ಈ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮಕ್ಕಳು ಹಾಗೂ ಹಿರಿಯ ನಾಗರಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಿವಾಸಿಗಳು ಹೇಳಿದ್ದಾರೆ.
“ಸ್ವಚ್ಛತಾ ಕಾಮಗಾರಿ ಮಾಡಿದರೆ ಸಾಕಾಗುವುದಿಲ್ಲ, ತೆಗೆದ ಕಸವನ್ನು ತಕ್ಷಣ ವಿಲೇವಾರಿ ಮಾಡಬೇಕು. ಇಲ್ಲವಾದರೆ ಸ್ವಚ್ಛತಾ ಕಾರ್ಯವೇ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವಂತಾಗುತ್ತದೆ” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ನಗರಸಭೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಚರಂಡಿ ಕಸವನ್ನು ತೆರವುಗೊಳಿಸಿ, ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande