

ವಿಜಯಪುರ, 11 ಮೇ (ಹಿ.ಸ.) :
ಆಂಕರ್ : ಸಾರ್ವಜನಿಕರು ವಿವಿಧ ಕಾರಣಗಳಿಂದ ತಮ್ಮ ಮನೆಗಳಿಗೆ ಬೀಗ ಹಾಕಿ ಹೊರಗಡೆ ತೆರಳುವ ಸಂದರ್ಭಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಹೊಸ ತಂತ್ರಜ್ಞಾನ ಆಧಾರಿತ “Locked House Beat System (LHBS)” ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ಬೀಗ ಹಾಕಿದ ಮನೆಗಳ ಮೇಲೆ ವಿಶೇಷ ನಿಗಾ ಇಟ್ಟು ಕಳ್ಳತನಗಳನ್ನು ತಡೆಗಟ್ಟುವ ಉದ್ದೇಶವನ್ನು ಪೊಲೀಸ್ ಇಲಾಖೆ ಹೊಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಯೋಜನೆ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸಲಿದ್ದು, ಮನೆಗಳನ್ನು ಖಾಲಿ ಬಿಟ್ಟು ಹೊರಡುವ ನಾಗರಿಕರಿಗೆ ಭದ್ರತೆಯ ಭರವಸೆ ನೀಡಲಿದೆ ಎಂದರು.
ಪೊಲೀಸರು ಗಮನಿಸಿದಂತೆ, ಜನರು ಮನೆಗಳಿಗೆ ಬೀಗ ಹಾಕಿ ಕೆಲ ದಿನಗಳ ಕಾಲ ಹೊರಗಡೆ ತೆರಳುವ ಸಂದರ್ಭಗಳನ್ನು ಕಳ್ಳರು ಗುರಿಯಾಗಿಸಿಕೊಂಡು ಕಳ್ಳತನ ಎಸಗುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ, ತಂತ್ರಜ್ಞಾನ ಬಳಸಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಈ ಯೋಜನೆಯಡಿ, ಸಾರ್ವಜನಿಕರು ತಮ್ಮ ಮನೆಗಳನ್ನು ಬಿಟ್ಟು ಹೊರ ಹೋಗುವ ಮೊದಲು ಪೊಲೀಸ್ ಇಲಾಖೆಗೆ ಕೆಲವು ಪ್ರಮುಖ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಹೆಸರು, ವಿಳಾಸ, ಮನೆಯ ಜಿಪಿಎಸ್ ಲೊಕೇಶನ್, ಮನೆಯ ಫೋಟೋ ಹಾಗೂ ಎಷ್ಟು ದಿನಗಳ ಕಾಲ ಮನೆ ಖಾಲಿಯಾಗಿರುತ್ತದೆ ಎಂಬ ಮಾಹಿತಿಯನ್ನು ಜಿಲ್ಲಾ ನಿಯಂತ್ರಣ ಕೊಠಡಿಯ ಮೊಬೈಲ್ ಸಂಖ್ಯೆ 8277970747 ಗೆ ಕಳುಹಿಸಬೇಕು ಎಂದು ಸೂಚಿಸಿದರು.
ಪೊಲೀಸರು ಪಡೆದ ಮಾಹಿತಿಯನ್ನು ಸಂಬಂಧಿತ ಪೊಲೀಸ್ ಠಾಣೆಗಳಿಗೆ ರವಾನಿಸಿ, ಬೀಟ್ ಸಿಬ್ಬಂದಿ ಮೂಲಕ ಆ ಮನೆಗಳ ಮೇಲೆ ನಿಗಾ ಇಡಲಾಗುತ್ತದೆ. ಬೀಟ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆಯ ಭದ್ರತೆ ಕುರಿತು ವರದಿ ನೀಡಲಿದ್ದಾರೆ. ಇದರಿಂದ ಕಳ್ಳತನ ತಡೆಗೆ ಪರಿಣಾಮಕಾರಿ ಕ್ರಮ ಸಾಧ್ಯವಾಗಲಿದೆ ಎಂದು ಇಲಾಖೆ ವಿಶ್ವಾಸವ್ಯಕ್ತಪಡಿಸಿದರು.
ಸಾರ್ವಜನಿಕರು ಹಂಚಿಕೊಳ್ಳುವ ಮಾಹಿತಿಯ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಪಾಡಲಾಗುವುದು ಎಂದು ಸ್ಪಷ್ಟಪಡಿಸಿದ ಅವರು, ಈ ಯೋಜನೆ ಸಾರ್ವಜನಿಕರಲ್ಲಿ ಭದ್ರತಾ ಭಾವನೆ ಮೂಡಿಸುವುದರ ಜೊತೆಗೆ, ಪೊಲೀಸ್ ಇಲಾಖೆ ಹಾಗೂ ನಾಗರಿಕರ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸುವತ್ತ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯ ಈ ನವೀನ ಉಪಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದ್ದು, ಮನೆ ಕಳ್ಳತನ ತಡೆಗೆ ಇದು ಪರಿಣಾಮಕಾರಿ ಕ್ರಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande