ಜಮಖಂಡಿ ಜೈಲಿನಲ್ಲಿ ಕೈದಿಗಳ ರೌಡಿಸಂ : ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಭೀಕರ ಹಲ್ಲೆ!
ಬಾಗಲಕೋಟೆ, 11 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ನಡೆಸಿದ ರೌಡಿಸಂ ಜೈಲು ಆಡಳಿತವನ್ನೇ ಬೆಚ್ಚಿಬೀಳಿಸಿದೆ. ಕೈದಿಗಳ ನಡುವಿನ ಜಗಳವನ್ನು ಶಮನಗೊಳಿಸಲು ತೆರಳಿದ್ದ ಜೈಲರ್ ಮೇಲೆಯೇ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಕೈದಿ
Jail


Jail


ಬಾಗಲಕೋಟೆ, 11 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ನಡೆಸಿದ ರೌಡಿಸಂ ಜೈಲು ಆಡಳಿತವನ್ನೇ ಬೆಚ್ಚಿಬೀಳಿಸಿದೆ. ಕೈದಿಗಳ ನಡುವಿನ ಜಗಳವನ್ನು ಶಮನಗೊಳಿಸಲು ತೆರಳಿದ್ದ ಜೈಲರ್ ಮೇಲೆಯೇ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಕೈದಿಗಳ ಗ್ಯಾಂಗ್ ಭೀಕರ ಹಲ್ಲೆ ನಡೆಸಿದ್ದು, ಜೈಲರ್ ಅವರ ಕೈ ಮುರಿದಿರುವ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಮಖಂಡಿ ಹೊರವಲಯದಲ್ಲಿರುವ ಉಪಕಾರಾಗೃಹದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಜೈಲಿನೊಳಗೆ ಕ್ಷುಲ್ಲಕ ವಿಚಾರಕ್ಕೆ ಕೆಲ ವಿಚಾರಣಾಧೀನ ಕೈದಿಗಳ ನಡುವೆ ಗಲಾಟೆ ಆರಂಭವಾಗಿತ್ತು ಎನ್ನಲಾಗಿದೆ. ಕೈದಿಗಳ ಜಗಳ ಹೆಚ್ಚಾಗುತ್ತಿರುವ ಮಾಹಿತಿ ತಿಳಿದ ಜೈಲರ್ ವಿ.ಡಿ. ಕುಂಬಾರ ಅವರು ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಕೈದಿಗಳನ್ನು ಸಮಾಧಾನಪಡಿಸಲು ಸ್ಥಳಕ್ಕೆ ಧಾವಿಸಿದ್ದರು.

ಆದರೆ, ಪರಿಸ್ಥಿತಿಯನ್ನು ಶಾಂತಗೊಳಿಸಲು ಹೋದ ಜೈಲರ್ ಮೇಲೆಯೇ ಕೈದಿಗಳ ಗ್ಯಾಂಗ್ ಏಕಾಏಕಿ ದಾಳಿ ನಡೆಸಿದೆ. ಜೈಲಿನೊಳಗೆ ಅಟ್ಟಹಾಸ ಮೆರೆದ ಕೈದಿಗಳು ಜೈಲರ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಪರಿಣಾಮವಾಗಿ ಅವರ ಎಡಗೈ ಫ್ರ್ಯಾಕ್ಚರ್ ಆಗಿದೆ. ಅಲ್ಲದೆ ದೇಹದ ಹಲವೆಡೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಹಲ್ಲೆಯಿಂದ ಗಾಯಗೊಂಡ ಜೈಲರ್ ವಿ.ಡಿ. ಕುಂಬಾರ ಅವರನ್ನು ತಕ್ಷಣವೇ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಯ ಬಳಿಕ ಜೈಲು ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.

ಈ ಪ್ರಕರಣದಲ್ಲಿ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಜಾಕೀರ್ ಹುಸೇನ್ ಮಕಾಂದಾರ್, ಫಯಾಜ್ ಮಕಾಂದಾರ್, ಅಶೋಕ ನಾಯ್ಕೋಡಿ ಹಾಗೂ ಅರ್ಪಾತ್ ತಾಳಿಕೋಟಿ ಎಂಬ ನಾಲ್ವರು ವಿಚಾರಣಾಧೀನ ಕೈದಿಗಳೇ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಜೈಲಿನೊಳಗೂ ತಮ್ಮ ದರ್ಪ ಮತ್ತು ಪ್ರಭಾವ ತೋರಲು ಯತ್ನಿಸಿದ ಈ ಗ್ಯಾಂಗ್ ವಿರುದ್ಧ ಇದೀಗ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಜೈಲಿನೊಳಗಿನ ಭದ್ರತಾ ವೈಫಲ್ಯಗಳ ಕುರಿತೂ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಜೈಲು ಸಿಬ್ಬಂದಿಯ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande