
ಚಳ್ಳಕೆರೆ, 11 ಮೇ (ಹಿ.ಸ.) :
ಆ್ಯಂಕರ್ : ಸಂಪುಟ ಸಹೋದ್ಯೋಗಿ ಡಿ ಸುಧಾಕರ್ ಅವರು, ಹೃದಯವಂತ ಜನನಾಯಕರಾಗಿದ್ದರು. ಅವರ ನಿಧನದಿಂದ ಕ್ರಿಯಾಶೀಲ ಜನಪ್ರತಿನಿಧಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಹೇಳಿದರು.
ಭಾನುವಾರ ಮುಂಜಾನೆ ನಿಧನರಾದ ಸಚಿವ ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದ ಸಚಿವರು, ಸುಧಾಕರ್ ಅವರು ಮೊದಲ ಬಾರಿಗೆ ಶಾಸಕರಾದಾಗಿನಿಂದ ಪರಿಚಿತರು. ಹುಟ್ಟು ಅನಿರೀಕ್ಷಿತ, ಸಾವು ಖಚಿತ ಎಂದು ನಾವೆಲ್ಲ ತಿಳಿದಿದ್ದೇವೆ. ಯಾವೂದೂ ಶಾಶ್ವತ ಅಲ್ಲ. ಕೊನೆಗೆ ಎಲ್ಲರೂ ಮಣ್ಣಾಗಿ ಹೋಗುತ್ತೇವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸುಧಾಕರ್ ಅವರು ನಿಧನರಾಗಿದ್ದು ಅಪಾರ ದುಃಖ ತಂದಿದೆ ಎಂದು ಹೇಳಿದರು.
ಸುಧಾಕರ್ ಅವರು ರಾಜ್ಯದಲ್ಲಿ ಸಣ್ಣ ಸಮುದಾಯದಿಂದ ಬಂದವರು. ನಾಲ್ಕು ಬಾರಿ ಶಾಸಕಾರಾಗಿ ಆಯ್ಕೆಯಾಗಿದ್ದರು. ಸಚಿವರಾಗಿಯೂ ಅವರು ಜನಪರ ಕೆಲಸ ಮಾಡಿದ್ದರು. ಎಲ್ಲರೊಂದಿಗೆ ಆಪ್ತತೆ ಹೊಂದಿದ್ದ ಅವರು, ಅಜಾತಶತ್ರುವಿನಂತಿದ್ದರು. ರೈತರು, ಕೂಲಿ ಕಾರ್ಮಿಕರು, ಬಡವರು, ಶೋಷಿತ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಬಣ್ಣಿಸಿದರು. ಸುಧಾಕರ್ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳು ಮತ್ತು ಆಪ್ತರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯ ಸಾಕಾರಕ್ಕೆ ಸುಧಾಕರ್ ಅವರು ಸಾಕಷ್ಟು ಹೋರಾಟ ಮಾಡಿದ್ದರು. ಅವರ ಹೆಸರು ಯೋಜನೆಗೆ ಇಡಬೇಕೆಂಬುದು ಜನರ ಅಭಿಪ್ರಾಯ. ಇದನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa