ಮೆಟ್ರಿಕ್ ನಂತರದ ಹಾಸ್ಟೆಲ್ ಅವ್ಯವಸ್ಥೆ ; ವಿದ್ಯಾರ್ಥಿಗಳ ಆಕ್ರೋಶ
ಗದಗ, 11 ಮೇ (ಹಿ.ಸ.) : ಆ್ಯಂಕರ್ : ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸುರಕ್ಷಿತ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಸರ್ಕಾರ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಇದೀಗ ಅವ್ಯವಸ್ಥೆಯ ಅಡ್ಡೆಯಾಗುತ್ತಿರುವ ಆರೋಪ ಕೇಳ
ಫೋಟೋ


ಗದಗ, 11 ಮೇ (ಹಿ.ಸ.) :

ಆ್ಯಂಕರ್ : ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸುರಕ್ಷಿತ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಸರ್ಕಾರ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಇದೀಗ ಅವ್ಯವಸ್ಥೆಯ ಅಡ್ಡೆಯಾಗುತ್ತಿರುವ ಆರೋಪ ಕೇಳಿಬಂದಿದೆ.

ಗದಗ ನಗರದ ಗಂಗೀಮಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಸರ್ಕಾರ ಪ್ರತಿದಿನದ ಆಹಾರ ಕ್ರಮದಲ್ಲಿ ಮೊಟ್ಟೆ, ಬಾಳೆಹಣ್ಣು, ಹಾಲು ಸೇರಿದಂತೆ ವಿವಿಧ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ನೀಡುವಂತೆ ಸ್ಪಷ್ಟ ಮಾರ್ಗಸೂಚಿ ರೂಪಿಸಿದೆ. ಆದರೆ ಗಂಗೀಮಡಿ ಹಾಸ್ಟೆಲ್ನಲ್ಲಿ ಈ ನಿಯಮಗಳು ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿವೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಮೊಟ್ಟೆ ಹಾಗೂ ಬಾಳೆಹಣ್ಣು ನೀಡಲಾಗುತ್ತಿಲ್ಲ. ಪ್ರಶ್ನೆ ಮಾಡಿದರೆ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತದೆ ಹಾಗೂ ಬೆದರಿಕೆ ಹಾಕಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಹಾಸ್ಟೆಲ್ನ ಅಡುಗೆ ಕೋಣೆಯಲ್ಲಿ ಬಳಸಲಾಗುತ್ತಿರುವ ಧಾನ್ಯಗಳ ಗುಣಮಟ್ಟ ಕೂಡ ಆತಂಕ ಹುಟ್ಟಿಸುವಂತಿದೆ. ಗೋಧಿ ಹಾಗೂ ಇತರ ಧಾನ್ಯಗಳಲ್ಲಿ ನುಸಿಗಳು ಬುಸುಗುಟ್ಟುತ್ತಿರುವ ದೃಶ್ಯಗಳು ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿಸಿವೆ. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳಿಂದಲೇ ಊಟ ತಯಾರಿಸಲಾಗುತ್ತಿದ್ದು, ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಕೆಲವರು ಹೊಟ್ಟೆನೋವು, ಅಸ್ವಸ್ಥತೆ ಸೇರಿದಂತೆ ಅನೇಕ ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಚಿಕಿತ್ಸೆ ಒದಗಿಸುವ ಗೋಜಿಗೂ ಹೋಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹಾಸ್ಟೆಲ್ನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ. ಬೇಸಿಗೆಯ ಬಿಸಿಲಿನ ನಡುವೆ ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹಾಸ್ಟೆಲ್ನ ನೀರಿನ ಟ್ಯಾಂಕ್ಗಳು ಪಾಚಿಗಟ್ಟಿದ್ದು, ಅದೇ ಗಲೀಜು ನೀರನ್ನು ಸ್ನಾನ ಹಾಗೂ ನಿತ್ಯ ಬಳಕೆಗೆ ವಿದ್ಯಾರ್ಥಿಗಳು ಉಪಯೋಗಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಅಲರ್ಜಿ, ಮೈತುಂಬಾ ತುರಿಕೆ ಸೇರಿದಂತೆ ಚರ್ಮರೋಗ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಪ್ರಕಾರ, ಹಾಸ್ಟೆಲ್ನಲ್ಲಿ ಕೊಠಡಿಗಳ ಸ್ವಚ್ಛತೆ ಕೂಡ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ವಿದ್ಯಾರ್ಥಿಗಳು ವಾಸಿಸುವ ಕೊಠಡಿಗಳು ಧೂಳು ತಿನ್ನುತ್ತಿದ್ದು, ಸ್ವಚ್ಛತೆ ಕೊರತೆಯಿಂದ ಅನಾರೋಗ್ಯದ ಭೀತಿ ಎದುರಾಗಿದೆ. ಸರ್ಕಾರದಿಂದ ನೀಡಲಾದ ಕಂಪ್ಯೂಟರ್ಗಳು ಧೂಳು ಹಿಡಿದು ಮೂಲೆಗುಂಪಾಗಿವೆ. ಡಿಜಿಟಲ್ ಶಿಕ್ಷಣಕ್ಕೆ ಸಹಕಾರಿಯಾಗಬೇಕಿದ್ದ ವ್ಯವಸ್ಥೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಳಕೆಯಾಗದೆ ಹಾಳಾಗುತ್ತಿವೆ ಎಂದು ಆರೋಪಿಸಲಾಗಿದೆ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ವಿದ್ಯಾರ್ಥಿಗಳು ಹಲವು ಬಾರಿ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ. “ಸಮಸ್ಯೆ ಹೇಳಿದರೆ ಕೇಳುವವರೇ ಇಲ್ಲ. ಅಧಿಕಾರಿಗಳು ಡೋಂಟ್ ಕೇರ್ ಧೋರಣೆ ತಾಳಿದ್ದಾರೆ” ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ಶಿವಕುಮಾರ್ ಮಾತನಾಡಿ, “ನಮಗೆ ಸರಿಯಾದ ಊಟ ಸಿಗುತ್ತಿಲ್ಲ. ಮೊಟ್ಟೆ, ಬಾಳೆಹಣ್ಣು ಕೊಡುವುದಿಲ್ಲ. ಪ್ರಶ್ನೆ ಮಾಡಿದರೆ ಟಾರ್ಗೆಟ್ ಮಾಡುತ್ತಾರೆ. ಹಾಸ್ಟೆಲ್ನಲ್ಲಿ ಮೂಲಭೂತ ಸೌಲಭ್ಯವೇ ಇಲ್ಲ” ಎಂದು ಆರೋಪಿಸಿದರು.

ಮತ್ತೊಬ್ಬ ವಿದ್ಯಾರ್ಥಿ ದೊಡ್ಡಬಸವರ ಮಾತನಾಡಿ, “ಪಾಚಿಗಟ್ಟಿದ ನೀರು ಬಳಸಿ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಹಲವರಿಗೆ ಮೈತುಂಬಾ ತುರಿಕೆ ಬಂದಿದೆ. ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯರು ಹಾಗೂ ಸಾರ್ವಜನಿಕ ವಲಯದಲ್ಲಿ ಕೂಡ ಈ ಅವ್ಯವಸ್ಥೆ ಕುರಿತು ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ಬಡ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕಾಗಿ ಕೋಟಿ ಕೋಟಿ ರೂಪಾಯಿ ಅನುದಾನ ನೀಡುತ್ತಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಟೀಕೆ ಕೇಳಿಬಂದಿದೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ನಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಒಟ್ಟಾರೆ, ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ನಿರ್ಮಾಣವಾಗಿದ್ದ ವಸತಿ ನಿಲಯವೇ ಇದೀಗ ವಿದ್ಯಾರ್ಥಿಗಳ ಪಾಲಿಗೆ ಸಂಕಷ್ಟದ ಗೂಡಾಗಿ ಮಾರ್ಪಟ್ಟಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಚಿವರು ತುರ್ತು ಗಮನಹರಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಜೋರಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande