ಬಳ್ಳಾರಿ ಜಿಲ್ಲೆ : ಗರ್ಭಕಂಠ ಕ್ಯಾನ್ಸರ್ ತಡೆ ಲಸಿಕೆ - 5,658 ಹೆಣ್ಣು ಮಕ್ಕಳಿಗೆ ಲಸಿಕೆ
ಬಳ್ಳಾರಿ, 11 ಮೇ (ಹಿ.ಸ.) : ಆ್ಯಂಕರ್ : ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಾರಕವಾಗಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲೆಯಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೆಚ್.ಪಿ.ವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯನ್ನು ನೀಡಲಾಗುತ್ತಿದೆ. ಪೋಷಕರು ಯಾವುದೇ ವದಂತಿ
ಬಳ್ಳಾರಿ ಜಿಲ್ಲೆ : ಗರ್ಭಕಂಠ ಕ್ಯಾನ್ಸರ್ ತಡೆ ಲಸಿಕೆ - 5,658 ಹೆಣ್ಣು ಮಕ್ಕಳಿಗೆ ಲಸಿಕೆ


ಬಳ್ಳಾರಿ ಜಿಲ್ಲೆ : ಗರ್ಭಕಂಠ ಕ್ಯಾನ್ಸರ್ ತಡೆ ಲಸಿಕೆ - 5,658 ಹೆಣ್ಣು ಮಕ್ಕಳಿಗೆ ಲಸಿಕೆ


ಬಳ್ಳಾರಿ, 11 ಮೇ (ಹಿ.ಸ.) :

ಆ್ಯಂಕರ್ : ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಾರಕವಾಗಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲೆಯಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೆಚ್.ಪಿ.ವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆಯನ್ನು ನೀಡಲಾಗುತ್ತಿದೆ. ಪೋಷಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ಮಕ್ಕಳಿಗೆ ಈ ಸುರಕ್ಷಿತ ಲಸಿಕೆಯನ್ನು ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮನವಿ ಮಾಡಿದ್ದಾರೆ.

ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕದಿ0ದ ಹರಡುವ ಹೆಚ್.ಪಿ.ವಿ ಸೋಂಕು ಕಾಲಕ್ರಮೇಣ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ. ಇದನ್ನು ತಡೆಯಲು 14 ವರ್ಷದ ಹರೆಯದಲ್ಲೇ ಲಸಿಕೆ ನೀಡುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಈ ಲಸಿಕೆಯನ್ನು ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಶೇ.99 ರಷ್ಟು ತಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಅಭಿಯಾನವು ಮಾರ್ಚ್ 11 ರಿಂದ ಪ್ರಾರಂಭವಾಗಿದ್ದು, ಒಟ್ಟು 90 ದಿನಗಳ ಕಾಲ ನಡೆಯಲಿದೆ. 14 ವರ್ಷದ ಎಲ್ಲಾ ಹೆಣ್ಣು ಮಕ್ಕಳು ಈ ಲಸಿಕೆಯನ್ನು ಪಡೆಯಲು ಅರ್ಹರಾಗಿದ್ದು, ಲಸಿಕೆ ಪಡೆಯಲು ಬರುವಾಗ ಪೋಷಕರು ಜೊತೆಯಲ್ಲಿರಬೇಕು ಮತ್ತು ಮಗುವಿನ ಜನನ ಪ್ರಮಾಣ ಪತ್ರವನ್ನು ತರುವುದು ಕಡ್ಡಾಯವಾಗಿದೆ. ಇದುವರೆಗೆ ಲಸಿಕೆ ಪಡೆದ ಮಕ್ಕಳಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬ0ದಿಲ್ಲ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ ಅವರು ಸ್ಪಷ್ಟಪಡಿಸಿದ್ದಾರೆ.

ಗುರಿ : ಜಿಲ್ಲೆಯಲ್ಲಿ ಒಟ್ಟು 16,495 ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈವರೆಗೆ 5,658 ಮಕ್ಕಳಿಗೆ ಲಸಿಕೆ ನೀಡಲಾಗಿದೆ.

ತಾಲ್ಲೂಕುವಾರು ಪ್ರಗತಿ ವಿವರ :

ಬಳ್ಳಾರಿ ತಾಲ್ಲೂಕಿನಲ್ಲಿ 7,578 ಹೆಣ್ಣು ಮಕ್ಕಳ ಗುರಿ ಹೊಂದಲಾಗಿದ್ದು, ಇದುವರೆಗೆ 2,324 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಅದರಂತೆ, ಸಂಡೂರು ತಾಲ್ಲೂಕಿನಲ್ಲಿ 2,840 ಮಕ್ಕಳಲ್ಲಿ 881 ಮಕ್ಕಳಿಗೆ ಹಾಕಲಾಗಿದೆ. ಸಿರುಗುಪ್ಪ ತಾಲ್ಲೂಕಿನಲ್ಲಿ 3,054 ಮಕ್ಕಳಲ್ಲಿ 1,453 ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕುರುಗೋಡು ತಾಲ್ಲೂಕು ವ್ಯಾಪ್ತಿಯಲ್ಲಿ 1,543 ಮಕ್ಕಳಲ್ಲಿ 630 ಮಂದಿಗೆ ಲಸಿಕೆ ನೀಡಲಾಗಿದೆ ಹಾಗೂ ಕಂಪ್ಲಿ ತಾಲ್ಲೂಕಿನ 1,480 ಹೆಣ್ಣು ಮಕ್ಕಳಲ್ಲಿ 370 ಹೆಣ್ಣು ಲಸಿಕೆ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿಯನ್ನು ನಂಬಬೇಡಿ. ಕ್ಯಾನ್ಸರ್ ಮುಕ್ತ ನಾಳೆಗಾಗಿ ಇಂದು ನಿಮ್ಮ ಮಕ್ಕಳಿಗೆ ಲಸಿಕೆಯ ಸುರಕ್ಷಾ ಕವಚವನ್ನು ನೀಡಿ. ಹೆಚ್ಚಿನ ಮಾಹಿತಿಗಾಗಿ ಅಥವಾ ಲಸಿಕೆ ಪಡೆಯಲು ಪೋಷಕರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande