
ಬೆಂಗಳೂರು, 11 ಮೇ (ಹಿ.ಸ.) :
ಆ್ಯಂಕರ್ : ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್ ಅವರ ಸೂಚನೆಯ ಮೇರೆಗೆ ಶಾಂತಿನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಗಣತಿ-2027ರ ಮೊದಲ ಹಂತದ ಮನೆಪಟ್ಟಿ ಹಾಗೂ ಗಣತಿ ಕಾರ್ಯವನ್ನು ಅಧಿಕಾರಿಗಳು ಮತ್ತು ಗಣತಿದಾರರು ತಡರಾತ್ರಿವರೆಗೂ ಚುರುಕಿನಿಂದ ನಡೆಸಿದರು.
ನಿಖರ ಹಾಗೂ ಸಮಗ್ರ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಜನಸಂಖ್ಯೆ, ಕುಟುಂಬದ ವಿವರಗಳು, ವಾಸಸ್ಥಳ ಮತ್ತು ಇತರ ಮೂಲಭೂತ ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯಿತು.
ಜನಗಣತಿ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ನಾಗರಿಕರು ಗಣತಿ ಸಿಬ್ಬಂದಿಗೆ ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಜನಗಣತಿಯ ಮಾಹಿತಿಗಳು ಸರ್ಕಾರದ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಗಳು ಹಾಗೂ ಭವಿಷ್ಯದ ಆಡಳಿತಾತ್ಮಕ ಯೋಜನೆಗಳಿಗೆ ಪ್ರಮುಖ ಆಧಾರವಾಗಲಿವೆ ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa