
ವಿಜಯಪುರ, 11 ಮೇ (ಹಿ.ಸ.) :
ಆಂಕರ್ : ಎಸ್ಎಸ್ಎಲ್ಸಿ (10ನೇ ತರಗತಿ) ಬಳಿಕ ವಿದ್ಯಾರ್ಥಿಗಳು ಯಾವ ಕ್ಷೇತ್ರವನ್ನು ಆಯ್ಕೆ ಮಾಡಬೇಕು ಎಂಬ ಗೊಂದಲಕ್ಕೆ ಸ್ಪಷ್ಟ ದಿಕ್ಕು ತೋರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತಿ ವಿಜಯಪುರ ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ವತಿಯಿಂದ “ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕರಿಯರ್ ಮೇಳ-2026” ಆಯೋಜಿಸಿ ವಿದ್ಯಾರ್ಥಿಗಳಿಗೆ ವಿವಿಧ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ, ಡಿಪ್ಲೊಮಾ ಹಾಗೂ ಐಟಿಐ ಸೇರಿದಂತೆ ವಿವಿಧ ಶಿಕ್ಷಣ ಮಾರ್ಗಗಳ ಬಗ್ಗೆ ವಿವರವಾಗಿ ತಿಳಿಸಲಾಯಿತು. ವಿದ್ಯಾರ್ಥಿಗಳ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಉದ್ಯೋಗಾವಕಾಶಗಳನ್ನು ಪರಿಗಣಿಸಿ ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದರು.
ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಬಿಎಸ್ಸಿ ಪದವಿಗಳಂತಹ ಉನ್ನತ ಶಿಕ್ಷಣದ ಅವಕಾಶಗಳು ಲಭ್ಯವಿರುವುದಾಗಿ ತಿಳಿಸಲಾಯಿತು.
ವಾಣಿಜ್ಯ ವಿಭಾಗದಲ್ಲಿ ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಅರ್ಥಶಾಸ್ತ್ರ ವಿಷಯಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬಿಕಾಂ, ಸಿಎ, ಸಿಎಸ್ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಲಾ ವಿಭಾಗದಲ್ಲಿ ಇತಿಹಾಸ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳ ಮೂಲಕ ಬಿಎ, ಕಾನೂನು ಶಿಕ್ಷಣ, ಯುಪಿಎಸ್ಸಿ/ಕೆಎಎಸ್ ಪರೀಕ್ಷೆಗಳು ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಅವಕಾಶಗಳಿವೆ ಎಂದು ಮಾಹಿತಿ ನೀಡಲಾಯಿತು.
ಡಿಪ್ಲೊಮಾ ಶಿಕ್ಷಣದಡಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಆಟೋಮೊಬೈಲ್ ಹಾಗೂ ಫ್ಯಾಷನ್ ಡಿಸೈನಿಂಗ್ ವಿಭಾಗಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಲಾಯಿತು. ತಾಂತ್ರಿಕ ಶಿಕ್ಷಣದ ಮೂಲಕ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿರುವುದನ್ನೂ ವಿವರಿಸಲಾಯಿತು.
ಐಟಿಐ ವಿಭಾಗದಲ್ಲಿ ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ಕಂಪ್ಯೂಟರ್ ಆಪರೇಟರ್, ಪ್ಲಂಬರ್ ಹಾಗೂ ಮೆಕ್ಯಾನಿಕ್ ತರಬೇತಿಗಳ ಕುರಿತು ಮಾಹಿತಿ ನೀಡಲಾಗಿದ್ದು, ಸರ್ಕಾರಿ ತಾಂತ್ರಿಕ ಉದ್ಯೋಗ, ಖಾಸಗಿ ಕೈಗಾರಿಕೆ ಹಾಗೂ ಸ್ವಯಂ ಉದ್ಯೋಗಕ್ಕೆ ಇದು ಉತ್ತಮ ವೇದಿಕೆ ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕರು ಹಾಗೂ ತಜ್ಞರು, “ಪೋಷಕರು ಅಥವಾ ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಕೋರ್ಸ್ ಆಯ್ಕೆ ಮಾಡದೆ, ವಿದ್ಯಾರ್ಥಿಗಳು ತಮ್ಮ ಸ್ವಂತ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳಬೇಕು. ಜೊತೆಗೆ ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನ ಪಡೆಯುವುದು ಉತ್ತಮ” ಎಂದು ಸಲಹೆ ನೀಡಿದರು.
ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕರಿಯರ್ ಮೇಳವು ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣ ಹಾಗೂ ಉದ್ಯೋಗ ದಿಕ್ಕು ನಿರ್ಧರಿಸಲು ಮಹತ್ವದ ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande