
ಗದಗ, 11 ಮೇ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಗಳ ಪರಿಣಾಮ ಜಾಗತಿಕ ಆರ್ಥಿಕತೆ ಮೇಲೆ ಬೀರುತ್ತಿದ್ದು, ದೇಶದ ಜನರು ಮಿತವ್ಯಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ದೇಶದ ಹಿತದೃಷ್ಟಿಯಿಂದಿದ್ದು, ಪ್ರತಿಯೊಬ್ಬ ನಾಗರಿಕರು ಅದನ್ನು ಪಾಲಿಸಬೇಕಾಗಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್–ಇಸ್ರೇಲ್ ಹಾಗೂ ಅಮೇರಿಕಾ ಸಂಬಂಧಿತ ಯುದ್ಧ ವಾತಾವರಣ ತೀವ್ರಗೊಂಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ಶೀಘ್ರದಲ್ಲೇ ಮುಗಿಯುವಂತೆ ಕಾಣುತ್ತಿಲ್ಲ ಎಂದರು. ಉಕ್ರೇನ್, ರಷ್ಯಾ ಯುದ್ಧದ ಸಮಯದಲ್ಲಿಯೂ ಭಾರತ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ವಿಶೇಷವಾಗಿ ರಸಗೊಬ್ಬರಗಳ ಕಚ್ಚಾವಸ್ತು ಕೊರತೆಯಿಂದ ಕೃಷಿ ಕ್ಷೇತ್ರಕ್ಕೆ ತೊಂದರೆ ಉಂಟಾಗಿತ್ತು ಎಂದು ಹೇಳಿದರು.
ಪ್ರಸ್ತುತ ಪೆಟ್ರೋಲ್, ಡೀಸೆಲ್ ಹಾಗೂ ಆಯಿಲ್ ಪೂರೈಕೆಯ ಮೇಲೂ ಜಾಗತಿಕ ಯುದ್ಧದ ಪರಿಣಾಮ ಬೀಳುತ್ತಿದೆ. ಭಾರತ ಹಲವು ಇಂಧನ ಅಗತ್ಯಗಳಿಗೆ ಇರಾನ್ ಸೇರಿದಂತೆ ವಿದೇಶಿ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳಲ್ಲಿ ದೊಡ್ಡ ಮಟ್ಟದ ಸಂಕಷ್ಟ ಉಂಟಾಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಂತರಾಷ್ಟ್ರೀಯ ವ್ಯಕ್ತಿತ್ವ ಹಾಗೂ ರಾಜತಾಂತ್ರಿಕ ಚಾತುರ್ಯ ಬಳಸಿ ನಿರ್ವಹಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಆಯಿಲ್ ಕಂಪನಿಗಳು ನಷ್ಟದಲ್ಲಿಯೇ ಇಂಧನ ವಿತರಣೆ ಮಾಡಿವೆ. ಯುದ್ಧ ಶೀಘ್ರ ಅಂತ್ಯವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಪರಿಸ್ಥಿತಿ ಇನ್ನೂ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಕೊರತೆ ಮತ್ತು ಬೆಲೆ ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಅಮೇರಿಕಾ, ಶ್ರೀಲಂಕಾ, ಮಲೇಷ್ಯಾ, ಮಯನ್ಮಾರ್, ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಬೆಲೆ ಏರಿಕೆ ಗಂಭೀರ ಮಟ್ಟ ತಲುಪಿದೆ. ಆದರೆ ಭಾರತದಲ್ಲಿ ಇತರ ರಾಷ್ಟ್ರಗಳಿಗಿಂತ ಸ್ಥಿತಿ ಉತ್ತಮವಾಗಿದೆ. ಇದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ಮೋದಿ ದೇಶದ ಜನತೆಗೆ ಮಿತವ್ಯಯದ ಸಂದೇಶ ನೀಡಿದ್ದಾರೆ ಎಂದರು.
ಜನರು ಅಗತ್ಯವಿರುವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬಳಸಬೇಕು. ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆಗೆ ಉತ್ತೇಜನ ನೀಡಬೇಕು. ವಿದೇಶಿ ಪ್ರವಾಸ ಹಾಗೂ ಅನಗತ್ಯ ವೆಚ್ಚಗಳನ್ನು ತಗ್ಗಿಸಬೇಕು. ಒಂದು ವರ್ಷ ಬಂಗಾರ ಖರೀದಿ ಮಾಡದಿದ್ದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಬಂಗಾರ ಖರೀದಿಯಿಂದ ವಿದೇಶಿ ವಿನಿಮಯದ ಮೇಲೆ ಒತ್ತಡ ಬೀಳುತ್ತದೆ ಎಂದು ಹೇಳಿದರು.
ದೇಶದ ಹಿತಕ್ಕಾಗಿ ನಾಗರಿಕರು ಇಷ್ಟಾದರೂ ತ್ಯಾಗ ಮಾಡಬೇಕು. ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಆಹಾರ ಕೊರತೆ ಉಂಟಾದಾಗ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಾರದಲ್ಲಿ ಒಂದು ದಿನ ಉಪವಾಸ ಮಾಡುವಂತೆ ಕರೆ ನೀಡಿದ್ದರು. ನಾಯಕನಿಗೆ ನೈತಿಕ ಬಲ ಇದ್ದಾಗ ಮಾತ್ರ ಇಂತಹ ಕರೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಅರ್ಥವಾಗುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ತ್ಯಾಗ ಹಾಗೂ ದೇಶಭಕ್ತಿ ಎಂಬುದೇ ಗೊತ್ತಿಲ್ಲ. ಜನರ ಮನಸ್ಸಿನಲ್ಲಿ ದೇಶಭಕ್ತಿ ಎಷ್ಟು ಆಳವಾಗಿ ನೆಲೆಗೊಂಡಿದೆ ಎಂಬುದನ್ನೂ ಅವರು ಅರ್ಥಮಾಡಿಕೊಂಡಿಲ್ಲ. ವಿರೋಧಕ್ಕಾಗಿ ವಿರೋಧ ಮಾಡುವ ರಾಜಕಾರಣ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇರಾಕ್ ಯುದ್ಧದ ಸಂದರ್ಭದಲ್ಲಿಯೇ ದೇಶದಲ್ಲಿ ಮೂರು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಿತ್ತು. ಗದಗದಿಂದ ದೆಹಲಿವರೆಗೂ ಪೆಟ್ರೋಲ್ ಬಂಕ್ಗಳ ಮುಂದೆ ಕಿಲೋಮೀಟರ್ಗಳಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾದ ನಿರ್ವಹಣೆ ಮಾಡಿರಲಿಲ್ಲ ಎಂದು ಟೀಕಿಸಿದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಜನರು ಸರ್ಕಾರದ ಸೂಚನೆಗಳಿಗೆ ಸ್ಪಂದಿಸಿದ್ದರು. ಅದೇ ರೀತಿಯಲ್ಲಿ ಈಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ದೇಶದ ಜನರು ಸ್ಪಂದಿಸುವ ವಿಶ್ವಾಸ ಇದೆ ಎಂದು ಹೇಳಿದರು.
“2028ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ”
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಬಲವರ್ಧನೆಗೊಂಡಿದೆ ಎಂದರು.
ಕರ್ನಾಟಕದಲ್ಲಿಯೂ ಬಿಜೆಪಿ ಪಕ್ಷದ ಬೇರು ಗಟ್ಟಿಯಾಗಿದ್ದು, ಜನಬೆಂಬಲ ಹೆಚ್ಚುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. 2028ರ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದರೆ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP