
ಕೋಲಾರ, ೧೧ ಮೇ (ಹಿ.ಸ) :
ಆ್ಯಂಕರ್ : ಕನ್ನಡ ಕುಲಪುರೋಹಿತ ಎಂದು ಪ್ರಖ್ಯಾತರಾದ ಅ.ನ.ಕೃ ಅವರು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ. ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿದ ಅವರು, 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂಬ ಮಂತ್ರವನ್ನು ಸಾರಿದವರು. ಕೋಲಾರ ಜಿಲ್ಲೆಯೊಂದಿಗೆ ಅವಿನಾಭಾವ ಸಂಬ0ಧ ಹೊಂದಿದ್ದ ಅ.ನ.ಕೃ ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಬೇಕು, ಎಂದು ಭುವನೇಶ್ವರಿ ಕನ್ನಡ ಸಂಘದ ಜಿಲ್ಲಾಧ್ಯಕ್ಷ ಕೆ.ಆರ್. ತ್ಯಾಗರಾಜ್ ತಿಳಿಸಿದರು.
ಕೋಲಾರ ನಗರದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಕಛೇರಿಯಲ್ಲಿ ಡಾ. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ರವರ ೧೧೮ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯದಲ್ಲಿ 'ಪ್ರಗತಿಶೀಲ' ಚಳವಳಿಯನ್ನು ಹುಟ್ಟುಹಾಕುವ ಮೂಲಕ ಜನಸಾಮಾನ್ಯರ ನೋವು-ನಲಿವುಗಳಿಗೆ ಅಕ್ಷರ ರೂಪ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ಕನ್ನಡ ನಾಡು-ನುಡಿ ಮತ್ತು ನೆಲದ ರಕ್ಷಣೆಗಾಗಿ ಹೋರಾಡಿದ ಮಹಾನ್ ಚೇತನವಿದು, ಎಂದು ಸ್ಮರಿಸಿದರು.
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ನಾರಾಯಣಪ್ಪ ಮಾತನಾಡಿ ಅ.ನ.ಕೃ ಅವರು ನೂರಾರು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಮಾತುಗಳಲ್ಲಿ ಗಾಂಭೀರ್ಯವಿತ್ತು, ಲೇಖನಿಯಲ್ಲಿ ಹರಿತವಿತ್ತು. ನಮ್ಮ ಜಿಲ್ಲೆಯ ಸಾಹಿತ್ಯಾಸಕ್ತರು ಅ.ನ.ಕೃ ಅವರ ಕೃತಿಗಳನ್ನು ಓದುವ ಮೂಲಕ ಅವರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಗೌರಿಪೇಟೆಯ ಕೆ.ಎನ್.ರವೀಂದ್ರನಾಥ್ ಮಾತನಾಡಿ ಇವರು ನಮ್ಮ ಕೋಲಾರದಲ್ಲಿ ಹುಟ್ಟಿದ್ದರಿಂದ ನಮಗೆ ಖುಷಿಯ ವಿಷಯ. ಕನ್ನಡ ಬಗ್ಗೆ ಯಾರಾದರೂ ಅವಹೇಳನವಾಗಿ ಮಾತನಾಡಿದರೆ ತೀವ್ರವಾಗಿ ಖಂಡಿಸುತ್ತಿದ್ದರು. ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಪ್ರಮುಖವಾದುದು ಸಂಧಾರಾಗ, ಉದಯರಾಗ, ಜೀವನನದಿ ಇನ್ನೂ ಅನೇಕ ಕೃತಿಗಳನ್ನು ಬರೆದಿದ್ದಾರೆ. ಇವರು ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಬೆಸ್ಕಾಂ ವಸತಿ ಗೃಹಗಳ ಬಳಿ ಇರುವ ಅ.ನ.ಕೃ ರಸ್ತೆ ಎಂದು ಇತ್ತು. ನಾಮಫಲಕ ರಸ್ತೆ ಕಾಮಗಾರಿ ಸಮಯದಲ್ಲಿ ತೆಗೆದು ಹಾಕಿದ್ದು, ಮತ್ತೆ ಅದೇ ಸ್ಥಳದಲ್ಲಿ ರಸ್ತೆ ನಾಮಫಲಕ ಹಾಕಬೇಕು. ಇವರ ಪುತ್ತಳಿಯನ್ನು ಆ ಸ್ಥಳದಲ್ಲಿ ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಮಾತನಾಡಿ ಕೋಲಾರ ಮಣ್ಣಿನ ಮಗನಾದ ಅ.ನ.ಕೃ ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ರಸ್ತೆ ನಾಮಫಲಕ ಮರುಸ್ಥಾಪನೆ ಮತ್ತು ಪುತ್ತಳಿ ಸ್ಥಾಪನೆಯ ವಿಚಾರವಾಗಿ ನಾವು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಿದ್ದೇವೆ. ಒಂದು ವೇಳೆ ವಿಳಂಬವಾದರೆ ಎಲ್ಲಾ ಕನ್ನಡಪರ ಸಂಘಟನೆಗಳು ಒಗ್ಗೂಡಿ ಹೋರಾಟ ರೂಪಿಸಬೇಕಾಗುತ್ತದೆ. ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿಯನ್ನು ಗೌರವಿಸುವಲ್ಲಿ ಯಾವುದೇ ರಾಜಿ ಇಲ್ಲ, ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಇ.ಕೃಷ್ಣೇಗೌಡ, ಉಪೇಂದ್ರ, ಶೇಷೇದ್ರಿ, ಶ್ರೀಧರ್, ಬೆಮಲ್ ಶ್ರೀನಿವಾಸ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್