
ಬೆಂಗಳೂರು, 10 ಮೇ (ಹಿ.ಸ.) :
ಆ್ಯಂಕರ್ : ಸಚಿವ ಸಂಪುಟ ಸಹೋದ್ಯೋಗಿಗಳು, ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ. ಸುಧಾಕರ್ ಅವರ ನಿಧನಕ್ಕೆ *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್* ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬ ಸದಸ್ಯರಿಗೆ, ಅಭಿಮಾನಿ ಬಳಗಕ್ಕೆ ಈ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಂದೇಶ ನೀಡಿದ್ದಾರೆ.
ಹಿರಿಯೂರು ಶಾಸಕರಾಗಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಪಾರ ಜನ ಸೇವೆ ಮಾಡಿರುವ ಸುಧಾಕರ್, ಜನಪರ ಜನಪ್ರತಿನಿಧಿ ಎಂದೇ ಹೆಸರುವಾಸಿಯಾಗಿದ್ದರು ಎಂದು ಹೇಳಿದ್ದಾರೆ.
ತಮಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ಡಿ. ಸುಧಾಕರ್, ಸದಾ ಕಾರ್ಯಪ್ರವೃತ್ತರಾಗಿದ್ದರು ಎಂದು ಡಾ. ಪಾಟೀಲ್ ಸ್ಮರಿಸಿದ್ದಾರೆ.
ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದರೂ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಹೊಂದಿದ್ದ ಸುಧಾಕರ್ ನಿಧನದಿಂದ ಅಪಾರ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಅಧಿಕಾರ ಇದ್ದಾಗಲೂ ಇಲ್ಲದಿದ್ದಾಗಲೂ ಜನರಿಗೆ ಸದಾ ಸೇವೆ ನೀಡುತ್ತಿದ್ದರಿಂದ ಡಿ. ಸುಧಾಕರ್ ಅವರನ್ನು ಹಿರಿಯೂರು ಕ್ಷೇತ್ರದ ಜನರು ಇವರನ್ನು ಬಡವರ ಬಂಧು ಎಂದು ಕರೆಯುತ್ತಿದ್ದರು. ಸಾವಿರಾರು ಮಹಿಳಾ ಸಹಕಾರ ಸಂಘಗಳಿಗೆ ಸುಧಾಕರ್ ಕೊಡುಗೆ ನೀಡಿರುವುದನ್ನು ನಾನು ಕಂಡಿದ್ದೇನೆ ಎಂದಿದ್ದಾರೆ.
ಡಿ. ಸುಧಾಕರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮತ್ತೊಮ್ಮೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಾ. ಶರಣಪ್ರಕಾಶ ಪಾಟೀಲ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa