18 ವರ್ಷದ ಬಳಿಕ ಗ್ರಾಮದ ಶಕ್ತಿ ದೇವಿಯ ಜಾತ್ರೆ ಸಂಭ್ರಮ
ಗದಗ, 10 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ 18 ವರ್ಷದ ಬಳಿಕ ಗ್ರಾಮ ದೇವತೆ ದ್ಯಾಮಮ್ಮ ದುರ್ಗಾದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು, ಗ್ರಾಮದಲ್ಲಿ ಭಕ್ತಿಭಾವದ ಜೊತೆಗೆ ಸಡಗರ-ಸಂಭ್ರಮ ಮನೆ ಮಾಡಿದೆ. ಐದು ದಿನಗಳ ಕಾಲ ನಡೆಯುತ್ತಿರುವ ಈ ಜಾತ್ರ
ಫೋಟೋ


ಗದಗ, 10 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ 18 ವರ್ಷದ ಬಳಿಕ ಗ್ರಾಮ ದೇವತೆ ದ್ಯಾಮಮ್ಮ ದುರ್ಗಾದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು, ಗ್ರಾಮದಲ್ಲಿ ಭಕ್ತಿಭಾವದ ಜೊತೆಗೆ ಸಡಗರ-ಸಂಭ್ರಮ ಮನೆ ಮಾಡಿದೆ. ಐದು ದಿನಗಳ ಕಾಲ ನಡೆಯುತ್ತಿರುವ ಈ ಜಾತ್ರೆಯಲ್ಲಿ ಗ್ರಾಮಸ್ಥರು ಕಟ್ಟುನಿಟ್ಟಿನ ಸಂಪ್ರದಾಯಗಳನ್ನು ಪಾಲಿಸುತ್ತಿದ್ದು, ಊರಿನಾದ್ಯಂತ ಧಾರ್ಮಿಕ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ಶಕ್ತಿ ದೇವತೆಯೆಂದೇ ಪ್ರಸಿದ್ಧಿ ಪಡೆದಿರುವ ದ್ಯಾಮಮ್ಮ ದುರ್ಗಾದೇವಿಯ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಿದ್ದು, ವಾದ್ಯ-ಕುಂಭಮೇಳ, ಪಲ್ಲಕ್ಕಿ ಉತ್ಸವ ಹಾಗೂ ಭಂಡಾರ ಎರಚುವ ಸಂಭ್ರಮ ಜಾತ್ರೆಗೆ ಮತ್ತಷ್ಟು ಮೆರುಗು ತಂದಿದೆ. ಸುಮಾರು ಐವತ್ತು ಕ್ವಿಂಟಾಲ್ ಭಂಡಾರ ತರಿಸಲಾಗಿದ್ದು, ಮೆರವಣಿಗೆ ಉದ್ದಕ್ಕೂ ಭಕ್ತರು ಭಂಡಾರ ಎರಚಿ ದೇವಿಗೆ ಜಯಘೋಷ ಕೂಗಿದರು. ಯುವಕರು, ಮಹಿಳೆಯರು, ಮಕ್ಕಳು ಭಂಡಾರದಲ್ಲಿ ಮಿಂದೇಳಿ ಜಾತ್ರೆಯ ಸಂಭ್ರಮವನ್ನು ಕಣ್ತುಂಬಿಕೊಂಡರು.

ಜಾತ್ರೆಯ ವಿಶೇಷವೆಂದರೆ ಗ್ರಾಮದಲ್ಲಿ ಐದು ದಿನಗಳ ಕಾಲ ಯಾವುದೇ ಮನೆಯಲ್ಲಿ ಅಡುಗೆ ಮಾಡುವಂತಿಲ್ಲ. ಗ್ರಾಮಸ್ಥರು ಮತ್ತು ಭಕ್ತರು ಅನ್ನಪ್ರಸಾದ ಸೇವನೆ ಮಾಡುವ ಮೂಲಕ ದೇವಿಯ ನಿಯಮ ಪಾಲಿಸುತ್ತಿದ್ದಾರೆ.

ಊರಿನಲ್ಲಿ ಯಾರೂ ಪಾದರಕ್ಷೆ ಧರಿಸುವಂತಿಲ್ಲ ಎಂಬ ನಿಯಮವೂ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸಿದವರಿಗೆ ಐದು ನೂರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ಗ್ರಾಮಸ್ಥರು ಭಕ್ತಿಭಾವದಿಂದ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಜಾತ್ರೆಯ ಅಂಗವಾಗಿ ದ್ಯಾಮಮ್ಮ ದುರ್ಗಾದೇವಿಯ ಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು. ವಾದ್ಯಗಳ ಘೋಷ, ಕುಂಭಮೇಳದ ಮೆರಗು ಮತ್ತು ಭಕ್ತರ ಜಯಘೋಷದ ನಡುವೆ ಪಲ್ಲಕ್ಕಿ ಗ್ರಾಮ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆ ವೇಳೆ ಭಕ್ತರು ಭಂಡಾರ ಎರಚಿ ಸಂಭ್ರಮಿಸಿದರು. ಕೆಲ ಯುವಕರು ಡಿಜೆ ಸಂಗೀತಕ್ಕೆ ತಕ್ಕಂತೆ ಭಂಡಾರ ಎರಚುತ್ತಾ ನೃತ್ಯ ಮಾಡಿ ಗಮನ ಸೆಳೆದರು.

ಗ್ರಾಮದ ಹಿರಿಯರಾದ ದೇಸಾಯಿಗೌಡ ಮಾತನಾಡಿ, “18 ವರ್ಷದ ಬಳಿಕ ಜಾತ್ರೆ ನಡೆಯುತ್ತಿರುವುದು ಗ್ರಾಮಸ್ಥರಿಗೆ ಅಪಾರ ಸಂತಸ ತಂದಿದೆ. ಶಕ್ತಿ ದೇವಿಯ ಆಶೀರ್ವಾದದಿಂದ ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಎಲ್ಲರೂ ಒಗ್ಗಟ್ಟಿನಿಂದ ಜಾತ್ರೆ ನಡೆಸುತ್ತಿದ್ದೇವೆ” ಎಂದರು.

ಜಾತ್ರೆಯ ಮತ್ತೊಂದು ವಿಶೇಷವೆಂದರೆ, ಮದುವೆಯಾಗಿ ಬೇರೆ ಊರುಗಳಿಗೆ ತೆರಳಿರುವ ಹೆಣ್ಣು ಮಕ್ಕಳು ಸಹ ಈ ಸಂದರ್ಭದಲ್ಲಿ ತವರೂರಿಗೆ ಆಗಮಿಸುತ್ತಾರೆ. ದೇವಿಗೆ ಪೂಜೆ ಸಲ್ಲಿಸಿ ಉಡಿ ತುಂಬುವ ಮೂಲಕ ತಮ್ಮ ಕುಟುಂಬದ ಸುಖ-ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಮಳೆ ಸಮೃದ್ಧಿಯಾಗಿ ಆಗಲಿ, ಬೆಳೆ ಚೆನ್ನಾಗಿ ಬರಲಿ ಎಂದು ಭಕ್ತರು ದೇವಿಗೆ ಮೊರೆ ಹೋಗುತ್ತಿದ್ದಾರೆ.

ಭಕ್ತರಾದ ಡಾ. ಶ್ವೇತಾ ಮಾತನಾಡಿ, “ದ್ಯಾಮಮ್ಮ ದೇವಿಯ ಜಾತ್ರೆ ನಮ್ಮ ಕುಟುಂಬದ ಭಕ್ತಿಯ ಸಂಕೇತವಾಗಿದೆ. ದೇವಿಯ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ” ಎಂದರು. ಮತ್ತೊಬ್ಬ ಭಕ್ತೆ ವಿದ್ಯಾ ಮಾತನಾಡಿ, “18 ವರ್ಷದ ಬಳಿಕ ನಡೆಯುತ್ತಿರುವ ಜಾತ್ರೆ ನೋಡಲು ತುಂಬಾ ಸಂತೋಷವಾಗುತ್ತಿದೆ. ಗ್ರಾಮವೇ ಹಬ್ಬದ ವಾತಾವರಣದಲ್ಲಿ ಮುಳುಗಿದೆ” ಎಂದು ಹೇಳಿದರು.

ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ವಿಶೇಷ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಮುಂಜಾನೆ ಉಪಹಾರದಿಂದ ಹಿಡಿದು ಮಧ್ಯಾಹ್ನ ಹಾಗೂ ರಾತ್ರಿ ಊಟದವರೆಗೆ ವ್ಯವಸ್ಥೆ ಮಾಡಿರುವ ಜಾತ್ರಾ ಸಮಿತಿ, ಗ್ರಾಮದಲ್ಲಿ ಮಡಿ-ಉಡಿಯ ಸಂಪ್ರದಾಯ ಕಾಪಾಡಲು ವಿಶೇಷ ಗಮನ ಹರಿಸಿದೆ. ನಿಯಮ ಪಾಲನೆಗಾಗಿ ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಒಟ್ಟಾರೆ ಬೆನಕನಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ದ್ಯಾಮಮ್ಮ ದುರ್ಗಾದೇವಿ ಜಾತ್ರೆ ಭಕ್ತಿ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಿ ಮೂಡಿಬಂದಿದ್ದು, ಐದು ದಿನಗಳ ಕಾಲ ಗ್ರಾಮವೇ ದೇವಿಯ ಆರಾಧನೆಯಲ್ಲಿ ತಲ್ಲೀನವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande