
ವಿಜಯಪುರ, 10 ಮೇ (ಹಿ.ಸ.) :
ಆಂಕರ್ : ಶ್ರೀಶೈಲ ಮಲ್ಲಿಕಾರ್ಜುನನ ಅನನ್ಯ ಭಕ್ತೆಯಾಗಿ ಭಕ್ತಿ, ತ್ಯಾಗ ಹಾಗೂ ಆತ್ಮಸಾಕ್ಷಾತ್ಕಾರದ ಮೂಲಕ ಸಮಾಜಕ್ಕೆ ದಿವ್ಯ ಮಾರ್ಗದರ್ಶನ ನೀಡಿದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ವಿವಿಧೆಡೆ ಭಕ್ತಿ ಭಾವದಿಂದ ಆಚರಿಸಲಾಯಿತು ಎಂದು ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿತಿಳಿಸಿದರು.
ಭಕ್ತರು, ಸಮಾಜದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮಲ್ಲಮ್ಮನವರ ಜೀವನ ಸಾಧನೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.
ಹೇಮರೆಡ್ಡಿ ಮಲ್ಲಮ್ಮನವರು ಶಿವಭಕ್ತಿ, ನಿಸ್ವಾರ್ಥ ಸೇವೆ ಹಾಗೂ ಆತ್ಮಶುದ್ಧಿಯ ಮೂಲಕ ಕನ್ನಡ ನಾಡಿನ ಭಕ್ತಿಪರಂಪರೆಯಲ್ಲಿ ಅಮರ ಸ್ಥಾನ ಪಡೆದ ಮಹಾನ್ ಸಾದ್ವಿಯಾಗಿದ್ದಾರೆ. ಜೀವನದಲ್ಲಿ ಎದುರಾದ ಅನೇಕ ಕಷ್ಟಗಳು, ನೋವುಗಳು ಹಾಗೂ ಪರೀಕ್ಷೆಗಳ ನಡುವೆಯೂ ಅವರು ಭಕ್ತಿಯ ಮಾರ್ಗದಿಂದ ಎಂದಿಗೂ ಹಿಂದೆ ಸರಿಯದೆ, ಶ್ರೀಶೈಲ ಮಲ್ಲಿಕಾರ್ಜುನನ ಮೇಲಿನ ಅಚಲ ನಂಬಿಕೆಯಿಂದ ಜೀವನ ನಡೆಸಿದರು ಎಂದು ಭಕ್ತರು ಸ್ಮರಿಸಿದರು.
ಮಲ್ಲಮ್ಮನವರ ಜೀವನವೇ ಇಂದಿನ ಸಮಾಜಕ್ಕೆ ಆದರ್ಶವಾಗಿದ್ದು, ತ್ಯಾಗ ಮತ್ತು ಭಕ್ತಿಯ ಮೂಲಕ ಆತ್ಮಸಾಕ್ಷಾತ್ಕಾರ ಸಾಧಿಸಬಹುದೆಂಬ ಸಂದೇಶವನ್ನು ಅವರು ಜಗತ್ತಿಗೆ ಸಾರಿದ್ದಾರೆ. “ಕಷ್ಟಗಳ ನಡುವೆ ಕೂಡ ಭಕ್ತಿಯ ದೀಪ ಆರದಿರಬೇಕು” ಎಂಬ ಅವರ ಬದುಕಿನ ಮೌಲ್ಯಗಳು ಇಂದಿಗೂ ಅನೇಕ ಮಂದಿಗೆ ಪ್ರೇರಣೆಯಾಗಿವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶೇಷ ಪೂಜೆಗಳು ನೆರವೇರಿಸಲಾಯಿತು. ಭಜನೆ, ಕೀರ್ತನೆ ಹಾಗೂ ಧಾರ್ಮಿಕ ಉಪನ್ಯಾಸಗಳ ಮೂಲಕ ಅವರ ತಪಸ್ಸು, ಶಿವಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಸ್ಮರಿಸಲಾಯಿತು.
ಭಕ್ತರು ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನವರ ತಪಸ್ಸಿನ ಪಾವನ ಚೈತನ್ಯ ಸಮಾಜದಲ್ಲಿ ಶಾಂತಿ, ಸಹನೆ ಮತ್ತು ಸೌಹಾರ್ದತೆಯನ್ನು ಬೆಳಗಿಸಲಿ ಎಂದು ಪ್ರಾರ್ಥಿಸಿದರು. ಅವರ ಆದರ್ಶಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡರೆ ಸಮಾಜದಲ್ಲಿ ನೈತಿಕ ಮೌಲ್ಯಗಳು ಮತ್ತಷ್ಟು ಬಲವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande