
ಬೆಂಗಳೂರು, 10 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿ ಕ್ರಮವು ಶೋಷಿತ ಸಮುದಾಯಗಳ ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರಿನ ಗಾಯತ್ರಿ ವಿಹಾರ್ ನಲ್ಲಿ ಇಂದು ನಡೆದ ಕರ್ನಾಟಕ ಮಾದರ ಮಹಾಸಭಾ ರಾಜ್ಯ ಕಾರ್ಯಕಾರಿಣಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, “ಒಳಮೀಸಲಾತಿ ಜಾರಿಗೆ ವಿವಿಧ ಹೋರಾಟಗಾರರ ಸಂಘಟನೆಗಳ ಪರಿಶ್ರಮವೇ ಪ್ರಮುಖ ಕಾರಣ. ಈಗ ಪ್ರವರ್ಗ ‘ಎ’ ಮತ್ತು ‘ಬಿ’ ಗುಂಪಿಗೆ ತಲಾ 5.25 ಶೇಕಡಾ ಹಾಗೂ ‘ಸಿ’ ಗುಂಪಿಗೆ 4.5 ಶೇಕಡಾ ಮೀಸಲಾತಿ ದೊರೆತಿದೆ. ಇದುವರೆಗೆ 15 ಶೇಕಡಾ ಮೀಸಲಾತಿಯಲ್ಲಿಯೂ ನಮ್ಮ ಸಮುದಾಯಕ್ಕೆ ಒಂದು ಶೇಕಡಾ ಅವಕಾಶವೂ ಸಿಗುತ್ತಿರಲಿಲ್ಲ” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಸರ್ವಾನುಮತದ ಬೆಂಬಲದಿಂದ ಈ ಯೋಜನೆ ಜಾರಿಯಾಗಿದೆ ಎಂದು ಅವರು ತಿಳಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಿತ್ರದುರ್ಗದಲ್ಲಿ ನೀಡಿದ್ದ ಭರವಸೆಯಂತೆ ಸರ್ಕಾರ ನಡೆದುಕೊಂಡಿದೆ ಎಂದು ಮುನಿಯಪ್ಪ ಹೇಳಿದರು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಣಾಳಿಕೆ ಅಧ್ಯಕ್ಷರಾಗಿ ಈ ವಿಷಯವನ್ನು ಮುಂದಿಟ್ಟಿದ್ದು, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಸಚಿವರ ಸಹಕಾರದಿಂದ ಒಳಮೀಸಲಾತಿ ಅನುಷ್ಠಾನ ಸಾಧ್ಯವಾಗಿದೆ ಎಂದರು.
“೧೦೧ ಜಾತಿಗಳು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಶೋಷಿತ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಏಕತೆ ಅಗತ್ಯ” ಎಂದು ಕರೆ ನೀಡಿದ ಅವರು, ಒಳಮೀಸಲಾತಿಯ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಹೇಳಿದರು.
ಈ ತಿಂಗಳ ಅಂತ್ಯದೊಳಗೆ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಸೂಚಿಸಿದ ಅವರು, ಪ್ರತಿಯೊಬ್ಬ ಕಾರ್ಯಕಾರಿಣಿ ಸದಸ್ಯರು ಕನಿಷ್ಠ ೫೦ ಹೊಸ ಸದಸ್ಯರನ್ನು ಸಂಘಟನೆಗೆ ಸೇರಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು. ಜೂನ್ ೧೪ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಉದ್ದೇಶ ಕೇವಲ ರಾಜಕೀಯವಲ್ಲ, ಬಡವರ ಹಾಗೂ ಪೌರಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗಾವಕಾಶ ಕಲ್ಪಿಸುವುದೇ ಮುಖ್ಯ ಗುರಿಯಾಗಿದೆ ಎಂದು ಮುನಿಯಪ್ಪ ಹೇಳಿದರು. “ನಮ್ಮ ಮಕ್ಕಳು ವೈದ್ಯರು, ಇಂಜಿನಿಯರ್ಗಳು, ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಾಗಬೇಕು. ಅವರಿಗೆ ಶಿಕ್ಷಣ ಮತ್ತು ಉದ್ಯೋಗದ ಹಕ್ಕು ದೊರಕಬೇಕು” ಎಂದು ಅವರು ಒತ್ತಿಹೇಳಿದರು.
“ಸ್ವಾಭಿಮಾನದಿಂದ ಬದುಕಲು ಇಂದು ದೊಡ್ಡ ಅವಕಾಶ ಸಿಕ್ಕಿದೆ. ಈ ಐತಿಹಾಸಿಕ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತಿಹಾಸದಲ್ಲಿ ಅಜರಾಮರರಾಗಲಿದ್ದಾರೆ” ಎಂದು ಸಚಿವ ಮುನಿಯಪ್ಪ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa