




ಕೊಪ್ಪಳ, 10 ಮೇ (ಹಿ.ಸ.) :
ಆ್ಯಂಕರ್ : ಮೇ 11 ರಿಂದ ಮೇ 14ರವರೆಗೆ ನಡೆಯಲಿರುವ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಅವರು ಹೇಳಿದರು.
2026ರ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳ ಕಛೇರಿ ಸಭಾಂಗಣದಲ್ಲಿ ರವಿವಾರದಂದು ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಈ ವರ್ಷದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿ0ದ ಆಚರಿಸಲಾಗುತ್ತಿದೆ. ಈ ಜಾತ್ರೆಯು ನಮ್ಮ ಭಾಗದ ಅತ್ಯಂತ ಪ್ರಸಿದ್ಧ ಧಾರ್ಮಿಕ ಉತ್ಸವವಾಗಿದ್ದು, ಈ ಸಲ ಜಾತ್ರೆಯ 15 ದಿನಗಳ ಅವಧಿಯಲ್ಲಿ ಸುಮಾರು 35 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮಹಾರಥೋತ್ಸವದ ದಿನ ಸುಮಾರು 3 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಸರ್ಕಾರದ ಶಿಷ್ಟಾಚಾರದಂತೆ ನಡೆಯುವ ಕಾರ್ಯಕ್ರಮಕ್ಕೆ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ ಅವರು ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಜಿಲ್ಲೆಯ ಇತರೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಜಾತ್ರೆಯ ಅಂಗವಾಗಿ ನಡೆಯುವ ಮಹಾ ದಾಸೋಹ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ನೀಡಲಾಗಿದ್ದು, ದಿನಂಪ್ರತಿ ಸಾವಿರಾರು ಭಕ್ತರಿಗೆ ಉಚಿತ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದ0ತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ದೇವಸ್ಥಾನದ ಸುತ್ತಮುತ್ತ ವಿದ್ಯುತ್ ಅಲಂಕಾರ, ರಸ್ತೆ ದುರಸ್ತಿ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಸಮಗ್ರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿ ನಿಯೋಜನೆ, ಸಿಸಿಟಿವಿ ನಿಗಾ ವ್ಯವಸ್ಥೆ ಮತ್ತು ನಿಯಂತ್ರಣ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿಯಾಗಿ ಆರೋಗ್ಯ ಇಲಾಖೆಯ ವತಿಯಿಂದ ತಾತ್ಕಾಲಿಕ ವೈದ್ಯಕೀಯ ಶಿಬಿರಗಳು, ತುರ್ತು ಸೇವೆಗಳಿಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ಅಗ್ನಿಶಾಮಕ ದಳದ ಸಿದ್ಧತೆ ಕೈಗೊಳ್ಳಲಾಗಿದೆ. ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗಾಗಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಭಕ್ತಾದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಇದರ ಜೊತೆಗೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಹಾಗೂ ಜಿಲ್ಲಾಡಳಿತ ಮತ್ತು ದೇವಸ್ಥಾನದ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು ಎಂದು ಸಂಸದರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್.ಪ್ರಕಾಶ್ರಾವ್, ಮುಖಂಡರಾದ ಪ್ರಾಧಿಕಾರದ ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ ಇಳಿಗೇರ್, ಶರಣಗೌಡ ಪಾಟೀಲ್ ವೆಂಕಟೇಶ್ ವಿ., ಪಂಪಾಪತಿ ರಾಟಿ, ವಿಜಯ್ ಕುಮಾರ್ ಶೆಟ್ಟಿ, ಚಂದನ್ ಶಿವು ದಳಪತಿ, ಹನುಮಂತಪ್ಪ, ಶರಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಹಾದಾಸೋಹಕ್ಕೆ ಚಾಲನೆ : ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಲಾದ ಮಹಾದಾಸೋಹ ಕಾರ್ಯಕ್ರಮಕ್ಕೆ ಸಂಸದರು ಚಾಲನೆ ನೀಡಿದರು. ಇದೇ ವೇಳೆ ಭಕ್ತರಿಗೆ ಪ್ರಸಾದ ಸೇವೆ ಮಾಡಿದರು.
ಭಕ್ತರು ಭಕ್ತಿಭಾವದಿಂದ ಮಹಾದಾಸೋಹದಲ್ಲಿ ಪಾಲ್ಗೊಂಡು, ಪ್ರಸಾದವನ್ನು ಸ್ವೀಕರಿಸಿದರು. ಜಾತ್ರೆಯ ದಿನಗಳಲ್ಲಿ ಪ್ರತಿದಿನವೂ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್