ಶಾರ್ಟ್ ಸರ್ಕ್ಯೂಟ್ ; ಜಾನುವಾರುಗಳ ಮೇವು ಬೆಂಕಿಗಾಹುತಿ : ರೈತನಿಗೆ ₹2 ಲಕ್ಷ ನಷ್ಟ
ವಿಜಯಪುರ, 10 ಮೇ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಒಣ ಮೇವು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಜಿಲ್ಲೆಯ ಬರಟಗಿ ತಾಂಡಾ–3ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರೈತನಿಗೆ ಲಕ್ಷಾಂತ
ಬೆಂಕಿ


ವಿಜಯಪುರ, 10 ಮೇ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಜಾನುವಾರುಗಳಿಗಾಗಿ ಸಂಗ್ರಹಿಸಿಟ್ಟಿದ್ದ ಒಣ ಮೇವು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಜಿಲ್ಲೆಯ ಬರಟಗಿ ತಾಂಡಾ–3ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಬರಟಗಿ ತಾಂಡಾ ನಿವಾಸಿ ಶ್ರೀಕಾಂತ್ ಜಾಧವ ಅವರಿಗೆ ಸೇರಿದ ಸುಮಾರು ₹2 ಲಕ್ಷ ಮೌಲ್ಯದ ಒಣ ಮೇವು ಬೆಂಕಿಗಾಹುತಿಯಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಆಹಾರ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಮೇವನ್ನು ಸಂಗ್ರಹಿಸಿ ಇಟ್ಟಿದ್ದರು. ಆದರೆ ಆಕಸ್ಮಿಕವಾಗಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಮೇವು ರಾಶಿಗೆ ವ್ಯಾಪಿಸಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಅಷ್ಟರೊಳಗೆ ಬಹುತೇಕ ಮೇವು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ಘಟನೆಯಿಂದ ಸಂಕಷ್ಟಕ್ಕೊಳಗಾದ ರೈತ ಶ್ರೀಕಾಂತ್ ಜಾಧವ ಅವರು ಸರ್ಕಾರದಿಂದ ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. “ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವುದು ಈಗ ದೊಡ್ಡ ಸವಾಲಾಗಿದೆ. ಸಂಗ್ರಹಿಸಿಟ್ಟಿದ್ದ ಮೇವು ಸುಟ್ಟು ಹೋಗಿರುವುದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಸ್ಥಳೀಯರು ಕೂಡ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತನ ನೆರವಿಗೆ ಧಾವಿಸಿ ತುರ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ವಿದ್ಯುತ್ ಸಂಪರ್ಕಗಳ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಮೂಡಿವೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande