ಶಾಂತಿ-ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ : ಶ್ರೀ ರಂಭಾಪುರಿ ಜಗದ್ಗುರುಗಳು
ಗದಗ, 10 ಮೇ (ಹಿ.ಸ.) : ಆ್ಯಂಕರ್ : ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬದುಕಿದರೆ ಜೀವನ ಬಂಗಾರದಂತಾಗುತ್ತದೆ. ಮರೆತು ಬದುಕಿದರೆ ಅದು ಬಂಧನಕಾರಿಯಾಗುತ್ತದೆ. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ
ಫೋಟೋ


ಗದಗ, 10 ಮೇ (ಹಿ.ಸ.) :

ಆ್ಯಂಕರ್ : ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬದುಕಿದರೆ ಜೀವನ ಬಂಗಾರದಂತಾಗುತ್ತದೆ. ಮರೆತು ಬದುಕಿದರೆ ಅದು ಬಂಧನಕಾರಿಯಾಗುತ್ತದೆ. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಗದಗ ಜಿಲ್ಲೆ ರೋಣ ತಾಲೂಕಿನ ಸೂಡಿ ಜುಕ್ತಿ ಹಿರೇಮಠದಲ್ಲಿ ನೂತನ ರಥದ ಲೋಕಾರ್ಪಣೆ ಹಾಗೂ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಅಂಗವಾಗಿ ನಡೆದ ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಅವರು, ಭೌತಿಕ ಸಂಪತ್ತು ಮಾತ್ರ ಜೀವನಕ್ಕೆ ಸಾಕಾಗುವುದಿಲ್ಲ. ಧರ್ಮಪ್ರಜ್ಞೆ ಮತ್ತು ರಾಷ್ಟ್ರಪ್ರಜ್ಞೆ ಕೂಡ ಅಗತ್ಯವಾಗಿವೆ ಎಂದು ಹೇಳಿದರು.

ಮಾನವನಿಗೆ ಉತ್ತಮ ಸಂಸ್ಕಾರ ದೊರೆತರೆ ಬದುಕು ಸಾರ್ಥಕವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತ ಬೋಧನೆ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸಿದ್ದಾರೆ. ಇತಿಹಾಸ ನಿನ್ನೆ ಸುಖವಿತ್ತು ಎಂದು ಹೇಳಿದರೆ, ವಿಜ್ಞಾನ ನಾಳೆ ಸುಖ ಸಿಗುತ್ತದೆ ಎಂದು ಹೇಳುತ್ತದೆ. ಆದರೆ ಧರ್ಮ ಸತ್ಯ ಮತ್ತು ಪ್ರಾಮಾಣಿಕತೆಯಿಂದ ಬದುಕಿದರೆ ಇದೇ ಜನ್ಮದಲ್ಲಿ ಸುಖ ಸಿಗುತ್ತದೆ ಎಂದು ಸಾರುತ್ತದೆ ಎಂದು ತಿಳಿಸಿದರು.

ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ನಿರಂತರ ಶ್ರಮದಿಂದ ಅದ್ಭುತ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದಾರೆ. ನೂತನ ರಥ ನಿರ್ಮಾಣಕ್ಕಾಗಿ ಅವರು ಪಟ್ಟ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಪೀಠದ ವತಿಯಿಂದ ರೇಷ್ಮೆ ಮಡಿ, ಸ್ಮರಣಿಕೆ ಹಾಗೂ ಫಲ-ಪುಷ್ಪ ನೀಡಿ ಗೌರವಿಸಲಾಯಿತು.

ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಮಾತನಾಡಿ, ಮಠ-ಮಂದಿರಗಳು ನಮ್ಮ ಸಂಸ್ಕೃತಿಯ ಸಂರಕ್ಷಣಾ ಕೇಂದ್ರಗಳಾಗಿವೆ. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು, ಆದರೆ ನೈತಿಕ ಮೌಲ್ಯಗಳು ಶಾಶ್ವತವಾಗಿರುತ್ತವೆ ಎಂದರು. ಸೂಡಿ ಶ್ರೀಗಳ ಶ್ರಮ ಹಾಗೂ ಭಕ್ತರ ಸಹಕಾರದಿಂದ ಸಮಾರಂಭ ಯಶಸ್ವಿಯಾಗಿದೆ ಎಂದು ಹೇಳಿದರು.

ಶ್ರೀಶೈಲದ ಡಾ. ಚನ್ನಸಿದ್ಧರಾಮ ಜಗದ್ಗುರುಗಳು ಮಾತನಾಡಿ, ಧರ್ಮದ ಅರಿವು ಎಂದಿಗೂ ಕಡಿಮೆಯಾಗುವುದಿಲ್ಲ. ವೀರಶೈವ ಧರ್ಮವು ವಿಶ್ವಬಂಧುತ್ವದ ಮೂಲಕ ಸಮಾಜದಲ್ಲಿ ಸಾಮರಸ್ಯ ಬೆಳೆಸುತ್ತಿದೆ ಎಂದರು.

ಕಾಶಿಯ ಡಾ. ಚಂದ್ರಶೇಖರ ಜಗದ್ಗುರುಗಳು ಧರ್ಮದ ದಾರಿ ಮೋಕ್ಷಕ್ಕೆ ಹೆದ್ದಾರಿಯಾಗಿದೆ ಎಂದು ತಿಳಿಸಿದರು. ಸಂಪತ್ತು ಹೆಚ್ಚಾದಂತೆ ಮಾನವೀಯ ಸಂಬಂಧಗಳು ಸಡಿಲಗೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಕಾಶಿಯ ನೂತನ ಜಗದ್ಗುರು ಡಾ. ವಿಶ್ವಾರಾಧ್ಯ ಮಲ್ಲಿಕಾರ್ಜುನ ಭಗವತ್ಪಾದರು ಮಾತನಾಡಿ, ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪುವುದಿಲ್ಲ. ಭಾರತೀಯ ಸಂಸ್ಕೃತಿ ಉಳಿವಿಗೆ ಯುವಕರ ಪಾತ್ರ ಮಹತ್ವದ್ದು ಎಂದರು.

ಸಮಾರಂಭ ಉದ್ಘಾಟಿಸಿದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಮಾತನಾಡಿ, ಭೌತಿಕ ಜೀವನದ ಜೊತೆಗೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕು. ಧರ್ಮ ಮನುಷ್ಯನ ಬದುಕಿಗೆ ದಿಕ್ಕು ತೋರಿಸುವ ಶಕ್ತಿಯಾಗಿದೆ ಎಂದು ಹೇಳಿದರು. ಸೂಡಿಯಲ್ಲಿ ನಡೆದಿರುವ ಎಲ್ಲಾ ಕಾರ್ಯಕ್ರಮಗಳು ವೈಭವದಿಂದ ಜರುಗುತ್ತಿವೆ ಎಂದು ಶ್ಲಾಘಿಸಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಆಧ್ಯಾತ್ಮಿಕ ಚಿಂತನೆಗಳು ಮಾನವ ಬದುಕಿನ ಉಜ್ವಲತೆಗೆ ಕಾರಣವಾಗಿವೆ ಎಂದರು. ಗ್ರಂಥ ಬಿಡುಗಡೆ ಮಾಡಿದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಭಾರತೀಯ ಸಂಸ್ಕೃತಿ ಹೊಸ ಶಕ್ತಿಯನ್ನು ತುಂಬಿದೆ ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸೂಡಿ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ನೂತನ ರಥದ ಲೋಕಾರ್ಪಣೆ ಗ್ರಾಮಸ್ಥರು ಮತ್ತು ಭಕ್ತರಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ಡಾ. ಸಂಗಮೇಶ ಸವದತ್ತಿಮಠ ಅವರಿಗೆ “ಭಾಷಾ ಭಾಸ್ಕರ” ಪ್ರಶಸ್ತಿ ಪ್ರದಾನ ಮಾಡಲಾಯಿತು. ನೂತನ ರಥ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಭಕ್ತರು ಭಾಗವಹಿಸಿದ್ದರು. ಬದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹಾಗೂ ರೋಣದ ಮಿಥುನ್ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತಿಭಾವದಿಂದ ಜರುಗಿತು. ಸಹಸ್ರಾರು ಭಕ್ತರು ಜಗದ್ಗುರುಗಳ ಆಶೀರ್ವಾದ ಪಡೆದರು. ಬಳಿಕ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande