ಉದ್ಯೋಗ ಖಾತರಿ ಕಾಮಗಾರಿಗಳ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಉಂಟಾಗಿದೆ
ಫೋಟೋ


ಗದಗ, 10 ಮೇ (ಹಿ.ಸ.) :

ಆ್ಯಂಕರ್ : ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಪೂರ್ವನಿಯೋಜಿತವಾಗಿ ಕೈಗೊಳ್ಳದೇ ಅವ್ಯವಸ್ಥೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ನೂರಾರು ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿಯಿಂದ ಪ್ರತಿ ವರ್ಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಬಡ ಕಾರ್ಮಿಕರಿಗೆ ನೀಡಬೇಕಾದ ಕಾಮಗಾರಿಗಳನ್ನು ಸಮರ್ಪಕವಾಗಿ ಯೋಜನೆ ರೂಪಿಸದೇ ಕೈಗೊಳ್ಳಲಾಗುತ್ತಿದೆ. ಇದರಿಂದ ಕೆಲಸ ನಿರ್ವಹಣೆ ಗೊಂದಲದ ನಡುವೆ ಸಾಗುತ್ತಿದ್ದು, ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮುಖ್ಯವಾಗಿ ಪೇಸ್ಲಾಕ್ ತಾಂತ್ರಿಕ ಸಮಸ್ಯೆಯನ್ನು ನೆಪವೊಡ್ಡಿ ಹಲವಾರು ಕಾರ್ಮಿಕರಿಗೆ ಕೆಲಸ ನೀಡದೇ ವಂಚಿಸಲಾಗುತ್ತಿದೆ. ಕೆಲಸಕ್ಕೆ ಹಾಜರಾದರೂ ಪೇಸ್ಲಾಕ್ ತೆಗೆಯದ ಕಾರಣ ಎನ್ಎಂಆರ್ ದಾಖಲೆಯಾಗುತ್ತಿಲ್ಲ. ಇದರಿಂದ ಕೂಲಿ ಸಿಗದೇ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ಕಳೆದ ವರ್ಷವೂ ಮಳೆ ಆರಂಭವಾದ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 20 ದಿನ ಕೆಲಸ ಮಾಡಿದರೂ ಕೆಲವೇ ದಿನಗಳ ಅರ್ಧ ಕೂಲಿ ಮಾತ್ರ ಪಾವತಿಸಲಾಗಿದೆ. ಇದಕ್ಕೂ ತಾಂತ್ರಿಕ ದೋಷವನ್ನೇ ಕಾರಣವಾಗಿ ಹೇಳಲಾಗಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ವರ್ಷವೂ ಪೂರ್ವಯೋಜನೆ ಇಲ್ಲದೇ ಏಕಾಏಕಿ ಕಾಮಗಾರಿ ಆರಂಭಿಸಲಾಗಿದ್ದು, ಕೆಲಸಕ್ಕಾಗಿ ಸ್ಥಳಕ್ಕೆ ತೆರಳಿದ ಕಾರ್ಮಿಕರು ಪೇಸ್ಲಾಕ್ ಸಮಸ್ಯೆಯಿಂದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ ಸೂರಣಗಿ ಮಾತನಾಡಿ, “ಪ್ರತಿ ವರ್ಷ ಕಾರ್ಮಿಕರು ಜಾಬ್ ಕಾರ್ಡ್ ಸಲ್ಲಿಸಿದರೂ ಸಿಬ್ಬಂದಿ ಸರಿಯಾಗಿ ಎನ್ಎಂಆರ್ ದಾಖಲಿಸುವುದಿಲ್ಲ. ಪೂರ್ವಯೋಜನೆ ಇಲ್ಲದೇ ಕಾಮಗಾರಿ ನಡೆಸುತ್ತಿರುವುದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಗುಳೆ ಹೋಗುವ ಪರಿಸ್ಥಿತಿ ಉಂಟಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಕೃಷಿ ಚಟುವಟಿಕೆ ಆರಂಭವಾಗುವ ಮೊದಲು ಸಮಸ್ಯೆ ಪರಿಹರಿಸಿ ಕೂಲಿಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಿಡಿಓ ಜಿ.ಎಂ. ರೋಣದ, “ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಪೂರ್ವನಿಯೋಜಿತವಾಗಿ ಕೈಗೊಳ್ಳಲಾಗುತ್ತಿದೆ. ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಮಾಹಿತಿ ನೀಡಲಾಗಿದೆ. ಪೇಸ್ಲಾಕ್ ಸೇರಿ ಕೆಲ ತಾಂತ್ರಿಕ ಸಮಸ್ಯೆಗಳ ಕಾರಣ ಕಾರ್ಮಿಕರ ನೋಂದಣಿ ವಿಳಂಬವಾಗುತ್ತಿದೆ. ಇದು ಜಿಲ್ಲೆಯ ಹಲವೆಡೆ ಕಂಡುಬಂದಿರುವ ಸಮಸ್ಯೆಯಾಗಿದ್ದು, ಶೀಘ್ರದಲ್ಲೇ ಪರಿಹರಿಸಿ ಕಾಮಗಾರಿ ಸುಗಮಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಹಿಳಾ ಕಾರ್ಮಿಕರು ಸೇರಿದಂತೆ ನೂರಾರು ಕೂಲಿಕಾರ್ಮಿಕರು ಭಾಗವಹಿಸಿ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande