
ವಿಜಯಪುರ, 10 ಮೇ (ಹಿ.ಸ.) :
ಆಂಕರ್ : “ತಾಯಿಯ ಮಮತೆ ಎಂದರೆ ಅಳೆಯಲಾರದ ಸಾಗರ, ಆಕೆಯ ತ್ಯಾಗವೇ ನಮ್ಮ ಬದುಕಿನ ಮೊದಲ ಪಾಠ” ಎಂಬ ಸಂದೇಶದೊಂದಿಗೆ ವಿಶ್ವ ತಾಯಂದಿರ ದಿನವನ್ನು ಜಿಲ್ಲೆಯಾದ್ಯಂತ ಭಾವಪೂರ್ಣವಾಗಿ ಆಚರಿಸಲಾಯಿತು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆ ಮೂಲಕ ಶುಭಾಶಯ ಕೋರಿದರು.
ಸಮಾಜದ ಎಲ್ಲ ಕ್ಷೇತ್ರಗಳ ಜನರು ತಮ್ಮ ತಾಯಿಯ ಮೇಲಿನ ಪ್ರೀತಿ, ಗೌರವ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿ ತಾಯಂದಿರ ತ್ಯಾಗವನ್ನು ಸ್ಮರಿಸಿದರು.
ತಾಯಿ ಎನ್ನುವುದು ಕೇವಲ ಒಂದು ಪದವಲ್ಲ; ಅದು ಪ್ರೀತಿ, ಕಾಳಜಿ, ತ್ಯಾಗ ಮತ್ತು ನಿಸ್ವಾರ್ಥ ಬದುಕಿನ ಪ್ರತೀಕವಾಗಿದೆ. ಮಗುವಿನ ಜನನದಿಂದ ಹಿಡಿದು ಅದರ ಬದುಕಿನ ಪ್ರತಿಯೊಂದು ಹಂತದಲ್ಲೂ ಬೆನ್ನೆಲುಬಾಗಿ ನಿಲ್ಲುವ ತಾಯಿ ತನ್ನ ಕನಸುಗಳನ್ನು ಮರೆತು ಮಕ್ಕಳ ಭವಿಷ್ಯ ಕಟ್ಟುವ ಮಹಾತಾಯಿಯಾಗಿರುತ್ತಾಳೆ.
ಮನೆಯಲ್ಲಿನ ಎಲ್ಲರ ಸಂತೋಷಕ್ಕಾಗಿ ತನ್ನ ನೋವುಗಳನ್ನು ಮೌನವಾಗಿ ನುಂಗಿ ಬದುಕುವ ತಾಯಿಯ ಸೇವೆ ಅಳತೆಯಾಗದಂತದ್ದು ಎಂದು ಹಲವರು ಅಭಿಪ್ರಾಯಪಟ್ಟರು.
“ನಮ್ಮ ಯಶಸ್ಸಿನ ಹಿಂದೆ ತಾಯಿಯ ಅಹೋರಾತ್ರಿ ಪ್ರಾರ್ಥನೆಗಳಿವೆ. ನಾವು ಎಷ್ಟು ದೊಡ್ಡ ಸ್ಥಾನಕ್ಕೇರಿದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ” ಎಂದು ಗಣ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಮಾಜದಲ್ಲಿ ತಾಯಿಯ ಸ್ಥಾನ ದೇವರಿಗಿಂತ ಮೇಲಿದ್ದು, ಪ್ರತಿಯೊಬ್ಬರೂ ತಮ್ಮ ತಾಯಿಯನ್ನು ಗೌರವಿಸಿ ಅವರ ಆರೋಗ್ಯ ಮತ್ತು ಸಂತೋಷದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರೆ ನೀಡಲಾಯಿತು.
ವಿಶ್ವ ತಾಯಂದಿರ ದಿನದ ಅಂಗವಾಗಿ ವಿವಿಧ ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಶುಭಾಶಯ ಸಂದೇಶಗಳು ಹಾಗೂ ತಾಯಂದಿರ ಸನ್ಮಾನ ಕಾರ್ಯಕ್ರಮಗಳು ನಡೆದವು. ಮಕ್ಕಳು ತಮ್ಮ ತಾಯಂದಿರೊಂದಿಗೆ ಸಮಯ ಕಳೆಯುವ ಮೂಲಕ ಪ್ರೀತಿಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದರು.
ಈ ಸಂದರ್ಭದಲ್ಲಿ “ತನ್ನ ತ್ಯಾಗದಿಂದ ಕುಟುಂಬವನ್ನು ಕಟ್ಟುವ ತಾಯಂದಿರು ಸಮಾಜದ ನಿಜವಾದ ಶಕ್ತಿಯಾಗಿದ್ದಾರೆ. ಜಗತ್ತಿನ ಎಲ್ಲ ತಾಯಂದಿರಿಗೂ ಹೃದಯಪೂರ್ವಕ ಕೃತಜ್ಞತೆಗಳು” ಎಂದು ಸಂದೇಶ ನೀಡಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande