
ಗದಗ, 10 ಮೇ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳಿಗೂ ಬೇಸಿಗೆಯ ತಾಪ ಸಂಕಷ್ಟ ಉಂಟು ಮಾಡುತ್ತಿದೆ. ನೀರು ಮತ್ತು ಆಹಾರದ ಅಭಾವದಿಂದ ಕಂಗಾಲಾಗಿರುವ ಪ್ರಾಣಿಗಳು ದಾಹ ನೀಗಿಸಿಕೊಳ್ಳಲು ಎಲ್ಲೆಲ್ಲಿ ನೀರು ಸಿಗುತ್ತದೆಯೋ ಅಲ್ಲಿಗೆ ಧಾವಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆಯಲ್ಲಿ ಎರಡು ಮಂಗಗಳು ರಸ್ತೆಯ ತಗ್ಗಿನಲ್ಲಿ ನಿಂತಿದ್ದ ನೀರನ್ನು ಕುಡಿಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಸಿಲಿನ ತೀವ್ರತೆಗೆ ದಾಹದಿಂದ ಬಳಲುತ್ತಿದ್ದ ಮಂಗಗಳು ರಸ್ತೆ ಬದಿಯಲ್ಲಿದ್ದ ಗುಂಡಿಯಲ್ಲಿ ನಿಂತಿದ್ದ ನೀರನ್ನು ಕುಡಿದು ದಾಹ ತೀರಿಸಿಕೊಂಡಿವೆ.
ಗ್ರಾಮದ ಜನರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿ ಅನೇಕರು ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾಡು ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿರುವ ಕಾರಣ ಮಂಗಗಳು ಸೇರಿದಂತೆ ಹಲವು ಪ್ರಾಣಿಗಳು ಗ್ರಾಮಗಳತ್ತ ಬರುತ್ತಿರುವುದು ಸಾಮಾನ್ಯವಾಗಿದೆ.
ಬೇಸಿಗೆಯ ತಾಪಮಾನ ಏರಿಕೆಯಿಂದ ಕೆರೆ-ಕೊಳಗಳು ಬತ್ತುತ್ತಿದ್ದು, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಆಹಾರ ಮತ್ತು ನೀರಿಗಾಗಿ ಪ್ರಾಣಿಗಳು ಅಲೆದಾಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಸುತ್ತಮುತ್ತಲೂ ಕಾಣಿಸಿಕೊಳ್ಳುತ್ತಿವೆ. ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ತಮ್ಮ ಮನೆಗಳ ಮುಂದೆ ನೀರಿನ ಪಾತ್ರೆ ಇಡುವ ಮೂಲಕ ಪ್ರಾಣಿ-ಪಕ್ಷಿಗಳಿಗೆ ಸಹಾಯ ಮಾಡಬೇಕೆಂದು ಮನವಿ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಬಿಸಿಲಿನ ತಾಪಕ್ಕೆ ನೀರಿಗಾಗಿ ಪರದಾಡಿದ ಮಂಗಗಳ ಈ ದೃಶ್ಯ ಮಾನವೀಯತೆ ಮತ್ತು ಪರಿಸರ ಸಂರಕ್ಷಣೆಯ ಅಗತ್ಯವನ್ನು ಮತ್ತೆ ನೆನಪಿಸುವಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP