
ವಿಜಯಪುರ, 10 ಮೇ (ಹಿ.ಸ.) :
ಆಂಕರ್ : ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಮತ್ತು ಜನಪರ ಆಡಳಿತದ ಮೂಲಕ ಗುರುತಿಸಿಕೊಂಡಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ಎಂ.ಬಿ. ಪಾಟೀಲ್ ಅವರು, “ಡಿ. ಸುಧಾಕರ್ ಅವರ ನಿಧನದ ಸುದ್ದಿ ಮನಸ್ಸಿಗೆ ಅತೀವ ದುಃಖ ಉಂಟುಮಾಡಿದೆ. ಅವರು ಕೇವಲ ರಾಜಕಾರಣಿ ಮಾತ್ರವಲ್ಲ, ಜನಸೇವೆಯನ್ನು ಧ್ಯೇಯವನ್ನಾಗಿಸಿಕೊಂಡಿದ್ದ ಸಜ್ಜನ, ಸರಳ ಮತ್ತು ಮಾನವೀಯ ಮೌಲ್ಯಗಳನ್ನು ಪಾಲಿಸಿಕೊಂಡು ಬಂದ ಜನನಾಯಕರು” ಎಂದು ತಿಳಿಸಿದ್ದಾರೆ.
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಡಿ. ಸುಧಾಕರ್ ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದ ಅವರು, ಸದಾ ಜನರೊಂದಿಗೆ ನೇರ ಸಂಪರ್ಕದಲ್ಲಿದ್ದು ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು. ಸಾರ್ವಜನಿಕ ಬದುಕಿನಲ್ಲಿ ಸರಳತೆ, ಸೌಜನ್ಯ ಹಾಗೂ ಸೇವಾ ಮನೋಭಾವದಿಂದ ಅವರು ಎಲ್ಲರ ಗೌರವಕ್ಕೂ ಪಾತ್ರರಾಗಿದ್ದರು ಎಂದು ಎಂ.ಬಿ. ಪಾಟೀಲ್ ಸ್ಮರಿಸಿದ್ದಾರೆ.
“ಸುಧಾಕರ್ ಅವರು ರಾಜಕೀಯದಲ್ಲಷ್ಟೇ ಅಲ್ಲ, ವೈಯಕ್ತಿಕ ಬದುಕಿನಲ್ಲೂ ಆತ್ಮೀಯತೆ ಮತ್ತು ವಿನಯದಿಂದ ನಡೆದುಕೊಂಡವರು. ಅವರ ಅಗಲಿಕೆಯಿಂದ ರಾಜ್ಯಕ್ಕೆ ಒಬ್ಬ ಅನುಭವಿ ಹಾಗೂ ಜನಪರ ನಾಯಕನ ಕೊರತೆ ಉಂಟಾಗಿದೆ. ಅವರ ಸೇವೆಯನ್ನು ಜನತೆ ಸದಾ ನೆನಪಿಸಿಕೊಳ್ಳಲಿದ್ದಾರೆ” ಎಂದು ಅವರು ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿ, ಜನಪರ ಯೋಜನೆಗಳ ಅನುಷ್ಠಾನ ಮತ್ತು ಸಾರ್ವಜನಿಕ ಸಮಸ್ಯೆಗಳ ಪರಿಹಾರದಲ್ಲಿ ಸುಧಾಕರ್ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನದಿಂದ ರಾಜಕೀಯ ವಲಯಕ್ಕೆ ದೊಡ್ಡ ಆಘಾತ ಉಂಟಾಗಿದ್ದು, ಅನೇಕ ನಾಯಕರು ಹಾಗೂ ಸಾರ್ವಜನಿಕರು ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಕೊನೆಯಲ್ಲಿ, “ಭಗವಂತನು ಡಿ. ಸುಧಾಕರ್ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ” ಎಂದು ಸಚಿವ ಎಂ.ಬಿ. ಪಾಟೀಲ್ ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande