ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ ಪೂರಕ : ತಯಬಅಲಿ ಹೊಂಬಳ
ಗದಗ, 10 ಮೇ (ಹಿ.ಸ.) : ಆ್ಯಂಕರ್ : ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ ಅತ್ಯಂತ ಪೂರಕವಾಗಿದ್ದು, ಬಾಲ್ಯದಲ್ಲಿಯೇ ಮಕ್ಕಳಿಗೆ ಸೂಕ್ತ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಮಕ್ಕಳ ಸಾಹಿತಿ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ
ಫೋಟೋ


ಗದಗ, 10 ಮೇ (ಹಿ.ಸ.) :

ಆ್ಯಂಕರ್ : ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಾಹಿತ್ಯ ಅತ್ಯಂತ ಪೂರಕವಾಗಿದ್ದು, ಬಾಲ್ಯದಲ್ಲಿಯೇ ಮಕ್ಕಳಿಗೆ ಸೂಕ್ತ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಜವಾಬ್ದಾರಿ ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಮಕ್ಕಳ ಸಾಹಿತಿ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ತಯಬಅಲಿ ಹೊಂಬಳ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂ.ಎಸ್. ಹುಲ್ಲೂರ ಹೈಟೆಕ್ ಕೋಚಿಂಗ್ ಸೆಂಟರ್ ಸಹಯೋಗದಲ್ಲಿ ನಗರದ ವಿಜಯ ಲಲಿತಕಲಾ ಮಹಾವಿದ್ಯಾಲಯದಲ್ಲಿ ಆರಂಭವಾದ ಎರಡು ದಿನಗಳ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಠ್ಯಪುಸ್ತಕಗಳ ಓದಿನ ಜೊತೆಗೆ ಮಕ್ಕಳ ಬೌದ್ಧಿಕ ಹಾಗೂ ಭಾವನಾತ್ಮಕ ವಿಕಾಸಕ್ಕೂ ಆದ್ಯತೆ ನೀಡಬೇಕು. ಶಾಲೆ ಹಾಗೂ ಮನೆಯ ವಾತಾವರಣ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವಂತಿರಬೇಕು ಎಂದು ಹೇಳಿದರು.

ಮಕ್ಕಳು ತಮ್ಮ ಜೀವಾನುಭವಗಳನ್ನು ಬರೆಯುವಂತೆ ಸಮಾಜ ಪ್ರೇರೇಪಿಸಬೇಕು. ಕಥೆಗಳು ಮಕ್ಕಳಿಗೆ ಮೌಲ್ಯಗಳನ್ನು ನೀಡುವುದರ ಜೊತೆಗೆ ಮನೋವಿಕಾಸಕ್ಕೂ ಕಾರಣವಾಗುತ್ತವೆ. ಆದರೆ ಕಥೆ ಹೇಳುವ ಮತ್ತು ಕೇಳುವ ಸಂಸ್ಕೃತಿಯಿಂದ ಮಕ್ಕಳು ದೂರವಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ‘ಗುಬ್ಬಚ್ಚಿಗೂಡು’ ಮಕ್ಕಳ ಪತ್ರಿಕೆಯ ಪ್ರಧಾನ ಸಂಪಾದಕ ಶಂಕರ ಹಲಗತ್ತಿ, ಸರ್ಕಾರ ಶಾಲೆಗಳನ್ನು ವಿಲೀನ ಮಾಡಿದರೆ ಆ ಗ್ರಾಮದ ಸಂಸ್ಕೃತಿಯನ್ನೇ ನಾಶ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಲ್ಲ ಮಾಧ್ಯಮಗಳಲ್ಲೂ ಕನ್ನಡವನ್ನು ಸೃಜನಶೀಲವಾಗಿ ಕಲಿಸುವ ವ್ಯವಸ್ಥೆ ರೂಪಿಸಬೇಕು. ಮಕ್ಕಳ ಸೃಜನಶೀಲ ವ್ಯಕ್ತಿತ್ವ ಬೆಳೆಯಲು ಹಿರಿಯರು ಸೂಕ್ತ ಅವಕಾಶ ಕಲ್ಪಿಸಬೇಕು ಎಂದರು.

ಮಕ್ಕಳ ಮೇಲಿನ ಶೋಷಣೆ ತಡೆಯುವ ದಿಸೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ತಯಬಅಲಿ ಹೊಂಬಳ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಬಿಡುವಿನ ವೇಳೆಯಲ್ಲಿ ಮಕ್ಕಳು ಜೀವನಾನುಭವ ಕಟ್ಟಿಕೊಳ್ಳಲು ಸಾಹಿತ್ಯ ಸಮ್ಮೇಳನಗಳಂತಹ ಚಟುವಟಿಕೆಗಳು ಪೂರಕವಾಗುತ್ತವೆ ಎಂದರು.

ಮಕ್ಕಳ ಬಾಲ್ಯ ಸಂತಸದಾಯಕವಾಗಿಸಲು ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ಮಹಾಮಾನವರಾಗಿ ಬೆಳೆಯಲು ಸಮಾಜದ ಎಲ್ಲ ವ್ಯವಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಅಂಕಗಳಿಕೆಯ ಸ್ಪರ್ಧೆಯಲ್ಲಿ ಮಕ್ಕಳು ತಮ್ಮ ಸುಂದರ ಬಾಲ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸೃಜನಶೀಲ ಮನಸ್ಸಿಗೆ ಸೂಕ್ತ ವಾತಾವರಣ ಮತ್ತು ಚಟುವಟಿಕೆಗಳನ್ನು ಒದಗಿಸುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸಬೇಕು. ಇದೇ ಉದ್ದೇಶದಿಂದ ಸಮ್ಮೇಳನವನ್ನು ಪ್ರಾಯೋಗಿಕ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ತಯಬಅಲಿ ಹೊಂಬಳ ಅವರ ಸಾಹಿತ್ಯ ಸೇವೆಯನ್ನು ಪರಿಚಯಿಸಿದ ಡಾ. ನಿಂಗೂ ಸೊಲಗಿ, ಮಕ್ಕಳ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ತಯಬಅಲಿ ಹೊಂಬಳ ಅವರು 54ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿ ಮಕ್ಕಳ ಲೋಕವನ್ನು ಸುಂದರಗೊಳಿಸುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕತೆ, ಕಾವ್ಯ ಹಾಗೂ ಕಾದಂಬರಿ ಪ್ರಕಾರಗಳಲ್ಲಿ ಅವರ ಸೇವೆ ಗಮನಾರ್ಹವಾಗಿದೆ ಎಂದು ಹೇಳಿದರು.

ಗೌಡಪ್ಪ ಹುಲ್ಲೂರ ಮಾತನಾಡಿ, ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ವಿಭಿನ್ನ ಅನುಭವ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ಪರಿಚಯಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಸಮ್ಮೇಳನಕ್ಕೂ ಮುನ್ನ ಭುವನೇಶ್ವರಿ ಮಂದಿರದಿಂದ ವಿಜಯ ಲಲಿತಕಲಾ ಮಹಾವಿದ್ಯಾಲಯದವರೆಗೆ ಭುವನೇಶ್ವರಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ವಿವಿಧ ಕಲಾತಂಡಗಳು, ಸಾಹಿತಿಗಳು ಹಾಗೂ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಡಯಟ್ ಪ್ರಾಚಾರ್ಯ ಜಿ.ಎಂ. ಮುಂದಿನಮನಿ, ವಿಜಯ ಕಲಾ ಸಂಸ್ಥೆಯ ಅಶೋಕ ಅಕ್ಕಿ, ಪ್ರಾಚಾರ್ಯ ಸಿ.ವಿ. ಬಡಿಗೇರ, ಸಾಹಿತಿ ಚಂದ್ರಶೇಖರ ವಸ್ತ್ರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತನುಶ್ರೀ ಹಾಗೂ ಕೃಷ್ಣಪ್ರಿಯ ಬದಿ ನಾಡಗೀತೆ ಪ್ರಸ್ತುತಪಡಿಸಿದರು. ವೈಷ್ಣವಿ ರಾಠೋಡ ಅವರಿಂದ ನೃತ್ಯ ಹಾಗೂ ಸರಸ್ವತಿ ಸಾಧನ ಕೇಂದ್ರದ ಮಕ್ಕಳಿಂದ ಗೀತಗಾಯನ ಜರುಗಿತು. ಬಸವರಾಜ ನೆಲಜೇರಿ ಸ್ವಾಗತಿಸಿದರು. ರಕ್ಷಿತಾ ಗಿಡ್ನಂದಿ ನಿರೂಪಿಸಿದರು. ಭಾಗ್ಯಶ್ರೀ ಹುರಕಡ್ಲಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande