
ಕೊಪ್ಪಳ, 10 ಮೇ (ಹಿ.ಸ.) :
ಆ್ಯಂಕರ್ : ನಗರಸಭೆ ಆವರಣದಲ್ಲಿ 192 ದಿನಗಳಿಂದ ನಡೆಯುತ್ತಿರುವ ಧರಣಿ ಹೋರಾಟಕ್ಕೆ 371(ಜೆ) ಹೋರಾಟ ವೇದಿಕೆ ಮುಖಂಂಡರಾದ ರಾಘವೇಂದ್ರ ಕುಷ್ಟಗಿ ಅವರು ಬೆಂಬಲಿಸಿ ಮಾತನಾಡಿ, ನ್ಯಾ. ಮಾರ್ಕಾಂಡೇಯ ಕಟ್ಜೂ ಅವರ ಕೆರೆ, ಸರೋವರ ರಕ್ಷಿಸುವ ಕೊಟ್ಟ ತೀರ್ಪನ್ನು ಉಲ್ಲೇಖಿಸಿ ಈ ತೀರ್ಪಿನಲ್ಲಿ ಯಾವುದೇ ಕಾರಣಕ್ಕೂ ಕೆರೆ ಕಟ್ಟೆ, ಸರೋವರ, ಗೋಮಾಳ ಸರ್ಕಾರ ಪರಭಾರೆ ಮಾಡುವಂತಿಲ್ಲ. ಇವುಗಳು ಪರಂಪರಾಗತವಾಗಿ ಸಮುದಾಯಗಳು ಸೃಷ್ಟಿಸಿಕೊಂಡ ಸಾಮೂಹಿಕ ಜನರು ಬಳಸುವ ಆಸ್ತಿಗಳಾಗಿವೆ. ಇದರ ಮೇಲೆ ಸರ್ಕಾರದ ಒಡೆತನದ ಹಕ್ಕಿಲ್ಲ. ಈ ಸ್ವತ್ತುಗಳ ಮೇಲೆ ಯಾವತ್ತೂ ಸಮುದಾಯದ ಪರಮಾಧಿಕಾರವಿದೆ. ಒಂದು ವೇಳೆ ಯಾವುದೇ ಕಾರಣದಿಂದ ಪರಭಾರೆ ಮಾಡಿದ್ದಲ್ಲಿ ವಾಪಸ್ ಪಡೆಯಬೇಕು ಎಂದಿರುವದನ್ನು ಆದೇಶ ಪ್ರತಿ ಹಿಡಿದು ತೋರಿಸಿದರು.
ಸಿದ್ದರಾಮಯ್ಯ ಸರ್ಕಾರ ಇದರ ಅನುಸಾರ ಬಸಾಪುರ ಕೆರೆಯನ್ನು ವಾಪಸ್ ಪಡೆದರೆ ಜನರಿಗೆ ಉಪಕಾರ ಮಾಡಿದಂತೆ ಆಗುತ್ತದೆ. ಇಲ್ಲಿ ಪರಂಪರಾಗತ ನಾಟಿ ಹಸುಗಳು ಸಾವಿರಾರು ಸಂಖ್ಯೆಯಲ್ಲಿ ಸಾಕಾಣಿಕೆ ಮಾಡುತ್ತಿರುವುದು ಸರ್ಕಾರ ಗಮನಿಸಬೇಕು. ಅತಿಕ್ರಮಿಸಿದ ಬಲ್ಡೋಟ ಕಂಪನಿಯಿಂದ ಕೆರೆಯನ್ನು ಮುಕ್ತಗೊಳಿಸಬೇಕು ಎಂದರು.
ಬಲ್ಡೋಟ ಕಾರ್ಖಾನೆ ತೊಲಗಿಸಿ ಕೊಪ್ಪಳ ಭಾಗ್ಯನಗರದ ಜನರ ಜೀವ, ಆರೋಗ್ಯ ಉಳಿಸಬೇಕು. ಗವಿಶ್ರೀಗಳ ಮಾತಿನಂತೆ ಬಲ್ಡೋಟ ವಿಸ್ತರಣೆಯ ಒಡಂಬಡಿಕೆ ವಾಪಸ್ ಪಡೆದ ಪತ್ರವನ್ನು ಜನಪ್ರತಿನಿಧಿಗಳು ತರಬೇಕು. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಎಂಎಸ್ಪಿಎಲ್ ಪೆಲ್ಲೆಟ್ ಘಟಕದ ಮಾಲಿನ್ಯ ನಗರದ ಅರ್ಧ ವಾರ್ಡಗಳಿಗೆ ಆಗುತ್ತಿದೆ. ಇಲ್ಲಿರುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದ್ದು, ಈ ಪೆಲ್ಲೆಟ್ ಘಟಕ ಬಂದ್ ಮಾಡಿ ನಗರದ ಜನರ ಆರೋಗ್ಯ, ಜೀವ ಉಳಿಸಬೇಕು. ಬಲ್ಡೋಟ ಕಂಪನಿ ಬಸಾಪುರ ಕೆರೆಯನ್ನು ಅನಧಿಕೃತವಾಗಿ ಮಂಜೂರಿ ಪಡೆದಿದ್ದು ಸುತ್ತಲಿನ ಸಾವಿರಾರು ಜಾನುವಾರು ನೀರು ಕುಡಿಯಲು ಕಾಂಪೌಂಡ್ ತೆರವು ಮಾಡಬೇಕು. ತುಂಗಭದ್ರಾ ನೀರು ವಿಷಗೊಳಿಸುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಛಬೇಕು. ಹಿರೇಬಗನಾಳ, ಅಲ್ಲಾನಗರ ಹತ್ತಿರದ ಸ್ಪಾಂಜ್ ಐರನ್ ಘಟಕಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಧರಣಿ ಹೋರಾಟ ಮುಂದುವರಿಯುತ್ತಿದೆ.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಿಪಿಐ ಮುಖಂಡ ಡಾ.ಕೆ.ಎಸ್ ಜನಾರ್ಧನ್, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಸರೋಜಾ ಬಾಕಳೆ, ಶಿವಕುಮಾರ ಕುಕನೂರು, ಶರಣು ಡೊಳ್ಳಿನ, ಭಂಡಾರಿ ವೀರಣ್ಣಶೆಟ್ಟಿ ರಾಯಚೂರು, ಶಂಭುಲಿಂಗಪ್ಪ ಹರಗೇರಿ, ವಿನೋದ ಡೊಳ್ಳಿನ, ರಾಜಶೇಖರ ಕೊಡ್ಲಿ, ಭಾಖರ್ ಹುಸೇನ್, ಗಾಳೆಪ್ಪ ಕಡೇಮನಿ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ ಲಾಚನಕೇರಿ, ಪಂಪಣ್ಣ ಚಿಂತಪಲ್ಲಿ, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಪರಶುರಾಮ ಮೆಘರಾಜ, ಗಾಳೆಪ್ಪ ಪೂಜಾರ ಮುದ್ದಾಬಳ್ಳಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್