ಕುಂಬಾರ ಭಾವಿ ಅನಾವರಣ ವೇಳೆ ಬೆಳಕಿಗೆ ಬಂದ ಐತಿಹಾಸಿಕ ಶಿಲ್ಪಕಲೆ
ಗದಗ, 10 ಮೇ (ಹಿ.ಸ.) : ಆ್ಯಂಕರ್ : ಐತಿಹಾಸಿಕ ತಾಣವಾಗಿ ಪ್ರಸಿದ್ಧಿ ಪಡೆದಿರುವ ಲಕ್ಕುಂಡಿ ಗ್ರಾಮದಲ್ಲಿ ಕುಂಬಾರ ಭಾವಿ ಅನಾವರಣದ ಸಂದರ್ಭದಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದ್ದು, ಇತಿಹಾಸಾಸಕ್ತರು ಹಾಗೂ ಪುರಾತತ್ವ ಸಂಶೋಧಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪತ್ತೆ
ಫೋಟೋ


ಗದಗ, 10 ಮೇ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ತಾಣವಾಗಿ ಪ್ರಸಿದ್ಧಿ ಪಡೆದಿರುವ ಲಕ್ಕುಂಡಿ ಗ್ರಾಮದಲ್ಲಿ ಕುಂಬಾರ ಭಾವಿ ಅನಾವರಣದ ಸಂದರ್ಭದಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದ್ದು, ಇತಿಹಾಸಾಸಕ್ತರು ಹಾಗೂ ಪುರಾತತ್ವ ಸಂಶೋಧಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಪತ್ತೆಯಾದ ಈ ವೀರಗಲ್ಲು ಕ್ರಿ.ಶ. 9ರಿಂದ 10ನೇ ಶತಮಾನಕ್ಕೆ ಸೇರಿದ್ದು, ಶಾಸನೋಕ್ತ ಹಾಗೂ ಶಿಲ್ಪಕಲೆಯ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ನಾಲ್ಕು ಪಟ್ಟಿಕೆಗಳ ರೂಪದಲ್ಲಿ ನಿರ್ಮಾಣಗೊಂಡಿರುವ ಈ ವೀರಗಲ್ಲು ಆ ಕಾಲದ ಸಾಮಾಜಿಕ, ಧಾರ್ಮಿಕ ಹಾಗೂ ಯುದ್ಧ ಸಂಸ್ಕೃತಿಯ ಚಿತ್ರಣವನ್ನು ಜೀವಂತವಾಗಿ ಬಿಂಬಿಸುತ್ತಿದೆ.

ವೀರಗಲ್ಲಿನ ಕೆಳಭಾಗದ ಮೊದಲ ಪಟ್ಟಿಕೆಯಲ್ಲಿ ಯುದ್ಧದ ದೃಶ್ಯ ಕೆತ್ತಲಾಗಿದ್ದು, ವೀರನು ಹೋರಾಟದಲ್ಲಿ ತೊಡಗಿರುವ ಶಿಲ್ಪಕಲೆ ಗಮನ ಸೆಳೆಯುತ್ತದೆ. ಆದರೆ ಆ ಭಾಗದ ಕೆಲವು ಅಂಶಗಳು ಮಣ್ಣಿನಲ್ಲಿ ಹೂತು ಹೋಗಿರುವುದರಿಂದ ಸಂಪೂರ್ಣ ದೃಶ್ಯ ಸ್ಪಷ್ಟವಾಗಿಲ್ಲ ಎಂದು ತಿಳಿದು ಬಂದಿದೆ.

ಎರಡನೇ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮರಣ ಹೊಂದಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯವನ್ನು ಮನಮೋಹಕವಾಗಿ ಕೆತ್ತಲಾಗಿದೆ. ಅಪ್ಸರೆಯರು ವೀರನ ಹೆಗಲ ಮೇಲೆ ಕೈ ಹಾಕಿಕೊಂಡು ಕರೆದುಕೊಂಡು ಹೋಗುತ್ತಿರುವ ಶಿಲ್ಪ ಆ ಕಾಲದ ಕಲಾತ್ಮಕತೆ ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ. ಅದರ ಪಕ್ಕದಲ್ಲೇ ಸಂಗೀತ ವಾದ್ಯ ನುಡಿಸುವ ಶಿಲ್ಪವೂ ಕಂಡುಬಂದಿದ್ದು, ವೀರನ ಸ್ವರ್ಗಾರೋಹಣವನ್ನು ಉತ್ಸವದ ರೂಪದಲ್ಲಿ ಚಿತ್ರಿಸಿರುವುದು ವಿಶೇಷವಾಗಿದೆ.

ಮೂರನೇ ಪಟ್ಟಿಕೆಯಲ್ಲಿ ವೀರನು ಸ್ವರ್ಗದಲ್ಲಿ ಆಸೀನನಾಗಿರುವ ಚಿತ್ರಣವಿದ್ದು, ಪಕ್ಕದಲ್ಲಿ ನಾಲ್ವರು ಚಾಮರಧಾರಿಣಿಯರ ಶಿಲ್ಪ ಕೆತ್ತಲಾಗಿದೆ. ಇದರಿಂದ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ವೀರರನ್ನು ದೈವೀ ಸ್ಥಾನದಲ್ಲಿ ಗೌರವಿಸುವ ಪರಂಪರೆ ಅಂದಿನ ಸಮಾಜದಲ್ಲಿ ಪ್ರಚಲಿತದಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ.

ನಾಲ್ಕನೇ ಪಟ್ಟಿಕೆಯ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ ಹಾಗೂ ಶಿವಲಿಂಗದ ಕೆತ್ತನೆಗಳಿದ್ದು, ಶಿವಲಿಂಗಕ್ಕೆ ಯತಿಯೊಬ್ಬರು ಪೂಜೆ ಸಲ್ಲಿಸುತ್ತಿರುವ ದೃಶ್ಯ ವಿಶೇಷ ಆಕರ್ಷಣೆಯಾಗಿದೆ. ಇದು ಆ ಕಾಲದ ಧಾರ್ಮಿಕ ನಂಬಿಕೆಗಳು ಹಾಗೂ ಶೈವ ಸಂಪ್ರದಾಯದ ಪ್ರಭಾವವನ್ನು ತೋರಿಸುತ್ತದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಅಪರೂಪದ ಹಾಗೂ ಶಾಸನೋಕ್ತ ವೈಶಿಷ್ಟ್ಯ ಹೊಂದಿರುವ ವೀರಗಲ್ಲು ಪತ್ತೆಯಾಗಿರುವುದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಪತ್ತೆಯಾದ ವೀರಗಲ್ಲಿನ ಕುರಿತು ಪುರಾತತ್ವ ಇಲಾಖೆ ಸಮಗ್ರ ಅಧ್ಯಯನ ಕೈಗೊಳ್ಳಬೇಕು ಹಾಗೂ ಸಂರಕ್ಷಣೆ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಇತಿಹಾಸಾಸಕ್ತರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande