
ಗದಗ, 10 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಯಾಗಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮೇ 24ರಂದು ಬಾಗಲಕೋಟೆಯ ನವನಗರದಲ್ಲಿ ಬೆಳ್ಳಿ ಮಹೋತ್ಸವ ಹಾಗೂ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ನಿರ್ದೇಶಕ ಸಂಗಮೇಶ ಹಾದಿಮನಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಂಕಪಟ್ಟಿ, ಶಾಲಾ ದಾಖಲೆಗಳ ಪ್ರತಿ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಘದ ವೆಬ್ಸೈಟ್ ಮೂಲಕ ಸಲ್ಲಿಸುವಂತೆ ಸೂಚಿಸಿದರು.
“ಶಿಕ್ಷಣದ ಮೂಲಕ ಸಮಾಜದ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂಘದ ಪ್ರಮುಖ ಧ್ಯೇಯವಾಗಿದೆ” ಎಂದು ಸಂಗಮೇಶ ಹಾದಿಮನಿ ಹೇಳಿದರು.
ಈ ವೇಳೆ ಗಂಗಾಮತ ಸಮಾಜಕ್ಕೆ ಎಸ್ಟಿ ಮೀಸಲಾತಿ ಅಡಿಯಲ್ಲಿ ಜಾತಿ ಪ್ರಮಾಣ ಪತ್ರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಗಂಗಾಮತ ಸಮಾಜ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಕಡು ಬಡತನದಲ್ಲಿ ಬದುಕು ಸಾಗಿಸುತ್ತಿದೆ. ಹೀಗಾಗಿ ಸರ್ಕಾರ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಎಸ್ಟಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರ ಪ್ರದರ್ಶನ ಕೂಡ ಆಯೋಜಿಸಲಾಗಿದ್ದು, ಸಮಾಜದ ಇತಿಹಾಸ ಮತ್ತು ಸಂಸ್ಕೃತಿಯ ಪರಿಚಯ ಮೂಡಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಮೊಖಾಸಿ, ಬಸವರಾಜ ಜಾಲಗಾರ, ಎಫ್.ಜಿ. ಬಾರಕೇರ, ಹರೀಶ ಬಾರಕೇರ, ಗುರು ಎಚ್. ತಿರ್ಲಾಪೂರ, ಶಿವಾನಂದ ಬಾರಕೇರ, ಗುಂಡಪ್ಪ ಮಡ್ಡಿಕಾರ, ಮಂಜುನಾಥ ಗುಡಿಸಾಗರ, ಸುರೇಶ ಗುರಿಕಾರ, ಸತೀಶ ಜಾಲವಾಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP