
ಬೆಂಗಳೂರು, 10 ಮೇ (ಹಿ.ಸ.) :
ಆ್ಯಂಕರ್ : ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಿರಿಯೂರು ಕ್ಷೇತ್ರದ ಶಾಸಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ. ಸುಧಾಕರ್ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಾಪ ಸಂದೇಶ ಪ್ರಕಟಿಸಿರುವ ಡಿ.ಕೆ. ಶಿವಕುಮಾರ್, “ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ” ಎಂದು ಹೇಳಿದ್ದಾರೆ.
ಹಿರಿಯೂರು ಶಾಸಕರಾಗಿಯೂ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ, ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಸುಧಾಕರ್ ಅವರು ಜನಪರ ಕಾಳಜಿಯುಳ್ಳ ನಾಯಕರಾಗಿದ್ದರು ಎಂದು ಡಿಸಿಎಂ ಸ್ಮರಿಸಿದ್ದಾರೆ. “ಬಡವರ ಬಂಧು ಎಂದೇ ಹೆಸರಾಗಿದ್ದ ಅವರು, ನನ್ನನ್ನು ಭೇಟಿ ಮಾಡಲು ಬಂದಾಗಲೆಲ್ಲ ತಮ್ಮ ಕ್ಷೇತ್ರದ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಯ ಮನವಿ ಹಿಡಿದುಕೊಂಡೇ ಬರುತ್ತಿದ್ದರು. ಆ ಗುಣವೇ ಕ್ಷೇತ್ರದ ಜನರ ಮೇಲಿದ್ದ ಅವರ ಅಪಾರ ಪ್ರೀತಿಯನ್ನು ತೋರಿಸುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಸುಧಾಕರ್ ಅವರ ನಿಧನದಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಅಪಾರ ಬೆಂಬಲಿಗರಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
“ಭಗವಂತನು ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa