ಬಾದಾಮಿ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ಆರೋಪಗಳ ಮಹಾಪೂರ
ಬಾಗಲಕೋಟೆ, 10 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಬಡ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯದ ಆಶಾಕಿರಣವಾಗಿರುವ ಬಾದಾಮಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಇದೀಗ ಅವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಆರ್ಥಿಕ ಅಕ್ರಮಗಳ ಆರೋಪಗಳಿಂದ ಸುದ್ದಿಯಲ್ಲಿದೆ. ಆಸ್ಪತ್ರೆಯಲ್ಲಿ ಮೂಲಭ
ಬಾದಾಮಿ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ಆರೋಪಗಳ ಮಹಾಪೂರ


ಬಾಗಲಕೋಟೆ, 10 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಬಡ ಮತ್ತು ಮಧ್ಯಮ ವರ್ಗದ ಜನರ ಆರೋಗ್ಯದ ಆಶಾಕಿರಣವಾಗಿರುವ ಬಾದಾಮಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಇದೀಗ ಅವ್ಯವಸ್ಥೆ, ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಆರ್ಥಿಕ ಅಕ್ರಮಗಳ ಆರೋಪಗಳಿಂದ ಸುದ್ದಿಯಲ್ಲಿದೆ. ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ವೈದ್ಯರ ಗೈರು ಹಾಜರಿ, ಔಷಧ ವಿತರಣೆ ಅಕ್ರಮ ಹಾಗೂ ಸಿಬ್ಬಂದಿಗಳ ಅಮಾನವೀಯ ವರ್ತನೆ ಕುರಿತು ಸಾರ್ವಜನಿಕರಿಂದ ಗಂಭೀರ ದೂರುಗಳು ಕೇಳಿಬರುತ್ತಿದ್ದು, ತಕ್ಷಣ ಸಮಗ್ರ ತನಿಖೆ ನಡೆಸುವಂತೆ ಒತ್ತಾಯ ವ್ಯಕ್ತವಾಗಿದೆ.

ಸ್ಥಳೀಯರು ಮತ್ತು ರೋಗಿಗಳ ಸಂಬಂಧಿಕರ ಪ್ರಕಾರ, ಸರ್ಕಾರದಿಂದ ಉಚಿತವಾಗಿ ಪೂರೈಕೆಯಾಗುವ ಔಷಧಿಗಳು ಆಸ್ಪತ್ರೆಯಲ್ಲಿ ಲಭ್ಯವಿಲ್ಲ ಎಂದು ಹೇಳಿ, ರೋಗಿಗಳನ್ನು ಹೊರಗಿನ ಖಾಸಗಿ ಮೆಡಿಕಲ್ ಅಂಗಡಿಗಳಿಗೆ ಕಳುಹಿಸಲಾಗುತ್ತಿದೆ. ಇದರ ಹಿಂದೆ ದೊಡ್ಡ ಮಟ್ಟದ ‘ಕಮಿಷನ್ ದಂಧೆ’ ನಡೆಯುತ್ತಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಬಡ ರೋಗಿಗಳು ಹಣ ಖರ್ಚು ಮಾಡಿ ಔಷಧ ಖರೀದಿಸಲು ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಇನ್ನೊಂದೆಡೆ, ಆಸ್ಪತ್ರೆಯ ಕೆಲವು ಸಿಬ್ಬಂದಿಗಳು ಹಾಗೂ ನರ್ಸ್ಗಳು ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಅಸಭ್ಯ ಹಾಗೂ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಚಿಕಿತ್ಸೆಗಾಗಿ ಬರುವ ಜನರಿಗೆ ಸಮರ್ಪಕ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಹಲವು ವಿಭಾಗಗಳಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ರೋಗಿಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯರ ಲಭ್ಯತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಆಸ್ಪತ್ರೆಯ ನೈರ್ಮಲ್ಯ ವ್ಯವಸ್ಥೆಯ ಮೇಲೂ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ವಾರ್ಡ್ಗಳು, ಶೌಚಾಲಯಗಳು ಹಾಗೂ ಆಸ್ಪತ್ರೆ ಆವರಣ ಗಲೀಜಾಗಿದ್ದು, ರೋಗಿಗಳಿಗೆ ಹೊಸ ಸೋಂಕುಗಳು ಹರಡುವ ಭೀತಿ ಎದುರಾಗಿದೆ. ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಯೇ ಅನಾರೋಗ್ಯದ ಕೇಂದ್ರವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ, ಸಣ್ಣಪುಟ್ಟ ಶಸ್ತ್ರಚಿಕಿತ್ಸೆ, ಪ್ರಸವ ಸೇರಿದಂತೆ ವಿವಿಧ ಚಿಕಿತ್ಸಾ ಸೇವೆಗಳ ಸಮಯದಲ್ಲಿ ರೋಗಿಗಳಿಂದ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಬಡ ಕುಟುಂಬಗಳು ಆಸ್ಪತ್ರೆಯಲ್ಲಿ ಉಚಿತ ಸೇವೆ ಸಿಗಬೇಕಾದರೆ ಅನಧಿಕೃತ ಹಣ ಪಾವತಿಸಬೇಕಾದ ಪರಿಸ್ಥಿತಿ ಎದುರಿಸುತ್ತಿರುವುದಾಗಿ ದೂರಲಾಗಿದೆ.

ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು (DHO) ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತಾತ್ಮಕ ಹಾಗೂ ಆರ್ಥಿಕ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸಿಬ್ಬಂದಿಗಳ ಹಾಜರಾತಿ ಮತ್ತು ವರ್ತನೆ ಕುರಿತು ಪರಿಶೀಲನೆ ನಡೆಸುವಂತೆ ಒತ್ತಾಯಿಸಲಾಗಿದೆ.

ಅದೇ ರೀತಿ, ಸಾರ್ವಜನಿಕರು ಮುಕ್ತವಾಗಿ ದೂರು ನೀಡಲು ಆಸ್ಪತ್ರೆಯಲ್ಲಿ ಸುಸಜ್ಜಿತ ದೂರು ಪೆಟ್ಟಿಗೆ ಅಳವಡಿಸಬೇಕು ಹಾಗೂ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಬಡ ಜನರಿಗೆ ಸರ್ಕಾರದ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕಾದರೆ ಬಾದಾಮಿ ಸರ್ಕಾರಿ ಆಸ್ಪತ್ರೆಯ ಮೇಲಿನ ನಂಬಿಕೆಯನ್ನು ಉಳಿಸುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಶಾಸಕರು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande