
ವಿಜಯಪುರ, 08 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಐತಿಹಾಸಿಕ ವಿಜಯಪುರ ನಗರದಲ್ಲಿ ಶ್ರೀ ಸದ್ಗುರು ಸಮರ್ಥ ರಂಗರಾವ ಮಹಾರಾಜರ ಧ್ಯಾನಮಂದಿರವನ್ನು ಭವ್ಯವಾಗಿ ನಿರ್ಮಿಸಲಾಗಿದ್ದು, ಅದರ ಲೋಕಾರ್ಪಣೆ ಕಾರ್ಯಕ್ರಮವು ಏಪ್ರಿಲ್ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಆಯೋಜಕರು ತಿಳಿಸಿದರು.
ಈ ಕುರಿತು ನಗರದ ಹೋಟೆಲ್ ವನಶ್ರೀನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಲಾಯಿತು.
ವಿಶ್ವಕರ್ಮ ಸಮಾಜದ ಸಹಕಾರದೊಂದಿಗೆ ವಿಜಯಪುರದ ಜಮಖಂಡಿ ರಸ್ತೆಯ ಖತಿಜಾಪೂರ ಸಮೀಪದ ಹೊಲದಲ್ಲಿ ಧ್ಯಾನಮಂದಿರ ಕಟ್ಟಡವನ್ನು ನಿರ್ಮಿಸಲಾಗಿದ್ದು, ಜೊತೆಗೆ ಶ್ರೀ ಸದ್ಗುರು ಸಮರ್ಥ ರಂಗರಾವ ಮಹಾರಾಜರ ದಿವ್ಯ ಮೂರ್ತಿಯನ್ನೂ ಪ್ರತಿಷ್ಠಾಪನೆಗೆ ಸಿದ್ಧಪಡಿಸಲಾಗಿದೆ. ರಾಜ್ಯದ ಅತೀ ಸುಂದರ ಹಾಗೂ ಭವ್ಯ ಧ್ಯಾನಮಂದಿರಗಳಲ್ಲಿ ಇದೂ ಒಂದು ಎಂದು ಈಗಾಗಲೇ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಶ್ರೀ ಸದ್ಗುರು ಸಮರ್ಥ ರಂಗರಾವ ಮಹಾರಾಜರು ಶ್ರೀಕ್ಷೇತ್ರ ಕುದರಿಸಾಲವಾಡಗಿಯಲ್ಲಿ 1900ರ ಡಿಸೆಂಬರ್ 2ರಂದು ಗೀತಾ ಜಯಂತಿಯ ಶುಭ ದಿನದಲ್ಲಿ ಅವತಾರ ಪಡೆದರು. ಬಾಲ್ಯದಲ್ಲಿಯೇ ಆಧ್ಯಾತ್ಮದತ್ತ ಮುಖ ಮಾಡಿದ ಅವರು 15ನೇ ವಯಸ್ಸಿನಲ್ಲಿ ಹೊರ್ತಿ ಗ್ರಾಮದ ಶ್ರೀ ಸ.ಸ. ರಾಜಾರಾಮಚಂದ್ರರಾವ ಮಹಾರಾಜರಿಂದ ಅನುಗ್ರಹ ಪಡೆದು ದಿನರಾತ್ರಿ ಧ್ಯಾನದಲ್ಲಿ ತೊಡಗಿದ್ದರು. ಬಳಿಕ ರಾಮನಟ್ಟಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಸುಮಾರು ಐದು ವರ್ಷಗಳ ಕಾಲ ಘೋರ ತಪಸ್ಸು ಮಾಡಿ ಸಾಕ್ಷಾತ್ಕಾರ ಪಡೆದ ಮಹಾಯೋಗಿಯಾಗಿದ್ದಾರೆ.
ನಂತರ ಗುರುಗಳ ಆಜ್ಞೆಯಂತೆ ಕುಬಕಡ್ಡಿಯಲ್ಲಿ ಗುರುವಿನ ಮಠವನ್ನು ನಿರ್ಮಿಸಿ, ಬಳಿಕ ವಿಜಯಪುರಕ್ಕೆ ಬಂದು ಮುರಾಣಕೇರಿಯಲ್ಲಿ ಶ್ರೀ ಗುರುಲಿಂಗ ಜಂಗಮ ಮಹಾರಾಜರ ಸಪ್ತಾಹವನ್ನು ಆರಂಭಿಸಿದರು. ಅವರ ಉಪದೇಶದಿಂದ ಅನೇಕ ಭಕ್ತರು ಭಕ್ತಿಮಾರ್ಗದಲ್ಲಿ ನಡೆದು ಆಧ್ಯಾತ್ಮಿಕ ಜೀವನಕ್ಕೆ ತೊಡಗಿದರು. ವಿಶೇಷವಾಗಿ ಗುರುಬಾಳಪ್ಪ ಪತ್ತಾರ ಅವರು ಮಹಾರಾಜರ ಸೇವೆಯಲ್ಲಿ ತೊಡಗಿ ನಂತರ ಸಪ್ತಾಹ ಪರಂಪರೆಯನ್ನು ಮುಂದುವರಿಸಿದರು.
ಮಹಾರಾಜರು 1975ರ ಜನವರಿ 21ರಂದು ದೇಹತ್ಯಾಗ ಮಾಡಿದ ಬಳಿಕ ಅವರ ಅನುಯಾಯಿಗಳು ಮತ್ತು ಗುರುಬಂಧುಗಳ ಸಹಕಾರದೊಂದಿಗೆ ಈ ಧ್ಯಾನಮಂದಿರ ನಿರ್ಮಾಣದ ಸಂಕಲ್ಪ ನೆರವೇರಿಸಲಾಗಿದೆ. ಗುರುಬಾಳಪ್ಪ ಪತ್ತಾರ ಅವರ ಪುತ್ರರು ಹಾಗೂ ಭಕ್ತರು ವಿಶ್ವಕರ್ಮ ಸಮಾಜದ ಸಹಕಾರದಿಂದ ಈ ಭವ್ಯ ಧ್ಯಾನಮಂದಿರವನ್ನು ನಿರ್ಮಿಸಿದ್ದಾರೆ.
ಮೂರು ದಿನಗಳ ಕಾರ್ಯಕ್ರಮ
ಏಪ್ರಿಲ್ 10ರಂದು ಬೆಳಿಗ್ಗೆ 7 ಗಂಟೆಗೆ ಮುರಾಣಕೇರಿಯ ರಂಗರಾವ ನಿವಾಸದಿಂದ ದಿವ್ಯ ಮೂರ್ತಿ ಹಾಗೂ ಪೂರ್ಣಕುಂಭ ಕಳಸವನ್ನು ಭವ್ಯ ದಿಂಡಿ ಪಾದಯಾತ್ರೆಯ ಮೂಲಕ ಧ್ಯಾನಮಂದಿರಕ್ಕೆ ತರಲಾಗುವುದು. ನಂತರ ಭಜನೆ ಹಾಗೂ ಜ್ಞಾನಿಗಳಿಂದ ಪ್ರವಚನ ನಡೆಯಲಿದೆ.
ಏಪ್ರಿಲ್ 11ರಂದು ಗುರು ಗಣಪತಿ ಪೂಜೆ, ನವಗ್ರಹ ಪೂಜೆ, ವಾಸ್ತು ಪೂಜೆ, ಹೋಮ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.
ಏಪ್ರಿಲ್ 12ರಂದು ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಪಂಚಾಮೃತ ಅಭಿಷೇಕ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜ್ಞಾನಿಗಳು ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈರಣ್ಣಾ ಗುರುಬಾಳಪ್ಪ ಪತ್ತಾರ, ಭೀಮಶಿ ಅಟಪಟಕರ, ಸಂತೋಷ ವಿಶ್ವಕರ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande