
ವಾಷಿಂಗ್ಟನ್, 08 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತವು ಎರಡು ವಾರಗಳ ಕದನ ವಿರಾಮ ಘೋಷಿಸಿದೆ. ಈ ನಿರ್ಧಾರಕ್ಕೆ ಇಸ್ರೇಲ್ ಸಹ ಒಪ್ಪಿಗೆ ನೀಡಿದ್ದು, ಇರಾನ್ ಜೊತೆ ನೇರ ಮಾತುಕತೆ ನಡೆಸಲು ಸಿದ್ಧತೆ ನಡೆಯುತ್ತಿದೆ.
ಫೆಬ್ರವರಿ 28ರಿಂದ ಉಗ್ರಗೊಂಡಿದ್ದ ಸಂಘರ್ಷದ ನಡುವೆ ಈ ತಾತ್ಕಾಲಿಕ ವಿರಾಮ ಜಾರಿಗೆ ಬಂದಿದ್ದು, ಜಾಗತಿಕ ಮಟ್ಟದಲ್ಲಿ ನಿರಾಳತೆ ಮೂಡಿಸಿದೆ. ಅಮೆರಿಕ ಹಾಗೂ ಇಸ್ರೇಲ್ ಈಗ ಇರಾನ್ ಜೊತೆ ಮುಖಾಮುಖಿ ಚರ್ಚೆ ನಡೆಸಿ ದೀರ್ಘಾವಧಿ ಒಪ್ಪಂದಕ್ಕೆ ಯತ್ನಿಸುತ್ತಿವೆ.
ಅಮೆರಿಕ ನಿಯೋಗವನ್ನು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ ನೇತೃತ್ವ ವಹಿಸುವ ಸಾಧ್ಯತೆ ಇದ್ದು, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಗೂ ಟ್ರಂಪ್ ಅಳಿಯ ಜಾರೆಡ್ ಕುಶ್ನರ್ ಭಾಗವಹಿಸುವ ನಿರೀಕ್ಷೆಯಿದೆ. ಮಾತುಕತೆ ಇಸ್ಲಾಮಾಬಾದನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಸೂಚಿಸಿವೆ.
ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಟ್ರಂಪ್ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದು, ಕದನ ವಿರಾಮ ಪಾಲನೆಗೆ ಬದ್ಧತೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಇರಾನ್ ತನ್ನ 10 ಅಂಶಗಳ ಯೋಜನೆಯನ್ನು ಮುಂದಿರಿಸಿ, ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರವನ್ನು ನಿಯಂತ್ರಿತ ರೀತಿಯಲ್ಲಿ ಪುನರಾರಂಭಿಸುವುದಾಗಿ ತಿಳಿಸಿದೆ. ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಪ್ರಕಾರ, ತಾಂತ್ರಿಕ ಮತ್ತು ಭದ್ರತಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಗಣೆ ಸುರಕ್ಷಿತವಾಗಿರಲಿದೆ.
ಕದನ ವಿರಾಮ ಸಾಧನೆಯಲ್ಲಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಪಾತ್ರವನ್ನು ಇರಾನ್ ಶ್ಲಾಘಿಸಿದೆ.
ಇದರ ನಡುವೆ, ಟ್ರಂಪ್ ನೀಡಿದ್ದ “ಹಾರ್ಮುಜ್ ತೆರೆಯದಿದ್ದರೆ ಕಠಿಣ ಪರಿಣಾಮಗಳು ಎದುರಾಗುತ್ತವೆ” ಎಂಬ ಎಚ್ಚರಿಕೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆಂಟೋನಿಯೊ ಗುಟೆರೆಸ್, ನಾಗರಿಕ ಮೂಲಸೌಕರ್ಯ ನಾಶ ಮಾಡುವ ಬೆದರಿಕೆಗಳು ಅಸ್ವೀಕಾರಾರ್ಹ ಎಂದು ಖಂಡಿಸಿದರು.
ಒಟ್ಟಾರೆ, ಮಧ್ಯಪ್ರಾಚ್ಯದ ಉದ್ವಿಗ್ನತೆಗೆ ತಾತ್ಕಾಲಿಕ ಶಮನ ಸಿಕ್ಕಿದ್ದು, ಮುಂದಿನ ಎರಡು ವಾರಗಳು ಶಾಶ್ವತ ಶಾಂತಿ ಒಪ್ಪಂದದ ದಿಕ್ಕಿನಲ್ಲಿ ನಿರ್ಣಾಯಕವಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa