ರಾಜ್ಯಪಾಲರನ್ನು ಹಿಂಪಡೆಯಲು ಕರವೇ ಆಗ್ರಹ
ಗದಗ, 08 ಏಪ್ರಿಲ್ (ಹಿ.ಸ.) ಆ್ಯಂಕರ್:- ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗದಗ ಜಿಲ್ಲಾ ಘಟಕವು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕರವೇ ಜ
ಫೋಟೋ


ಗದಗ, 08 ಏಪ್ರಿಲ್ (ಹಿ.ಸ.)

ಆ್ಯಂಕರ್:- ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗದಗ ಜಿಲ್ಲಾ ಘಟಕವು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರವೇ ಜಿಲ್ಲಾ ಅಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ರಾಜ್ಯಪಾಲರು ಹಿಂದಿ ಪರ ನಿಲುವು ತಾಳುತ್ತಾ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸಲು ರಾಜ್ಯಪಾಲರು ಪತ್ರ ಬರೆದಿರುವುದು ಗಂಭೀರ ವಿಷಯವಾಗಿದೆ ಎಂದು ತಿಳಿಸಲಾಗಿದೆ.

ಈ ಕ್ರಮದ ಹಿಂದೆ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತಗೊಳಿಸುವ ಉದ್ದೇಶ ಇದೆ ಎಂದು ಕರವೇ ಆರೋಪಿಸಿದ್ದು, ರಾಜ್ಯಪಾಲರು ತಮ್ಮ ಸಂವಿಧಾನಾತ್ಮಕ ವ್ಯಾಪ್ತಿಯನ್ನು ಮೀರಿ ಆಡಳಿತಾತ್ಮಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ. ರಾಜ್ಯದ ಶಿಕ್ಷಣ ಹಾಗೂ ಭಾಷಾ ನೀತಿಯನ್ನು ನಿರ್ಧರಿಸುವ ಅಧಿಕಾರ ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರಕ್ಕೇ ಸೇರಿದೆ ಎಂದು ಸ್ಪಷ್ಟಪಡಿಸಿದೆ.

ಇದಲ್ಲದೆ, “ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ” ಎಂಬ ಅನಾಮಧೇಯ ಸಂಘಟನೆಯ ಮನವಿಗೆ ತುರ್ತಾಗಿ ಸ್ಪಂದಿಸಿರುವುದು ಅನುಮಾನಾಸ್ಪದ ಬೆಳವಣಿಗೆ ಎಂದು ಹೇಳಲಾಗಿದೆ. ಕರ್ನಾಟಕವನ್ನು ಹಿಂದಿ ಭಾಷಿಕರ ‘ಸುರಕ್ಷಿತ ವಲಸೆ ಕೇಂದ್ರ’ವಾಗಿಸುವ ಯತ್ನಗಳು ನಡೆಯುತ್ತಿವೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದೆ.

ರಾಜ್ಯಪಾಲರ ನಡೆ ಕನ್ನಡದ ಆಸ್ಮಿತೆಗೆ ಧಕ್ಕೆಯಾಗಿದೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಕ್ರಮವನ್ನು ರಾಜ್ಯ ಸರ್ಕಾರ ಪರಿಗಣಿಸಬಾರದು ಹಾಗೂ ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದೆ.

ಹಿಂದಿ ಹೇರಿಕೆ ವಿರುದ್ಧ ರಾಜ್ಯದಲ್ಲಿ ನಡೆದ ಹಿಂದಿನ ಹೋರಾಟಗಳನ್ನು ಉಲ್ಲೇಖಿಸಿದ ಕರವೇ, ಮುಂದೆಯೂ ಕನ್ನಡದ ಗೌರವ ಹಾಗೂ ಭಾಷಾ ನೀತಿ ರಕ್ಷಣೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ನಬಿಸಾಬ ಕಿಲ್ಲೇದಾರ, ಲೋಕೇಶ ಸುತಾರ, ಶಿವು ಮಠದ, ಚನ್ನಬಸಯ್ಯ ಗಡ್ಡದೇವರಮಠ, ಶಿವು ಎಸ್. ಮಠದ, ಬಸವರಾಜ ಹೊಗೆಸೊಪ್ಪಿನ, ಶರಣಪ್ಪ ಪುರ್ತಗೇರಿ, ಪ್ರವೀಣ್ ಗಾಣಗೇರ (ಜಿಲ್ಲಾ ಉಪಾಧ್ಯಕ್ಷ), ಗಂಗಾಧರ ಕೋಟಿಗೇರಿಮಠ, ಅರುಣ ಮೆಕ್ಕಿ, ರಹಮಾನ ದರಗಾದ, ಗಂಗಾಧರ ಕೊಂಚಿಗೇರಿಮಠ, ಗೌಸುಸಾಬ ಮಾಶಿರಹಟ್ಟಿ, ರವಿ ಮಲ್ಲಾಡದ, ಇಸಾಕ್ ಅಹ್ಮದ್ ನದಾಫ, ಸಿರಾಜ್ ಹೊಸಮನಿ, ಮಾರುತಿ ಎಲ್. ಈಳಗೇರ, ಕೃಷ್ಣ ಎಸ್. ಲಮಾಣಿ, ವಿಜಯ ಬಡಿಗೇರ, ಶ್ರೀಮತಿ ಆಶಾ ಜೂಲಗುಡ್ಡ, ವಿನಾಯಕ ಬದಿ, ದಾವಲಸಾಬ ತಹಶೀಲ್ದಾರ, ಹುಸೇನ ಅಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande