ಚಿತ್ರದುರ್ಗದಲ್ಲಿ ‘ಸ್ವಯಂ ಗಣತಿ’ ಚುರುಕುಗೊಳಿಸಲು ಸೂಚನೆ
ಚಿತ್ರದುರ್ಗ, 08 ಏಪ್ರಿಲ್ (ಹಿ.ಸ.): ಆ್ಯಂಕರ್: ಭಾರತದ ಜನಗಣತಿ–2027 ಅಂಗವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಸ್ವಯಂ ಗಣತಿ’ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲ
Meeting


ಚಿತ್ರದುರ್ಗ, 08 ಏಪ್ರಿಲ್ (ಹಿ.ಸ.):

ಆ್ಯಂಕರ್:

ಭಾರತದ ಜನಗಣತಿ–2027 ಅಂಗವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ‘ಸ್ವಯಂ ಗಣತಿ’ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಗಣತಿಯ ಮೊದಲ ಹಂತವಾದ ಮನೆ ಪಟ್ಟಿ ತಯಾರಿಕೆ ಈಗಾಗಲೇ ಆರಂಭವಾಗಿದ್ದು, ಸಾರ್ವಜನಿಕರು ಸ್ವಯಂವಾಗಿ ಮಾಹಿತಿ ಸಲ್ಲಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ—ಗ್ರೂಪ್ ‘ಡಿ’ ಮಟ್ಟದವರವರೆಗೂ—ಮೊದಲು ತಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಬೇಕು. ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿಯಲ್ಲಿ ಶೇ.100ರಷ್ಟು ಸ್ವಯಂ ಗಣತಿ ಪೂರ್ಣಗೊಂಡಿರುವ ಬಗ್ಗೆ ಅಕ್ನಾಲೆಡ್ಜ್‌ಮೆಂಟ್ ಸಂಖ್ಯೆಗಳ ಪಟ್ಟಿಯನ್ನು ಮುಂದಿನ ಸೋಮವಾರದೊಳಗೆ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.

ನೆರೆಯ ಜಿಲ್ಲೆಗಳಲ್ಲಿ ಸ್ವಯಂ ಗಣತಿ ಶೇ.4ರಿಂದ 5ರಷ್ಟು ಪ್ರಗತಿ ಕಂಡಿದ್ದರೆ, ಚಿತ್ರದುರ್ಗದಲ್ಲಿ ಕೇವಲ ಶೇ.0.64ರಷ್ಟು ಮಾತ್ರ ದಾಖಲಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.

ಆರೋಗ್ಯ ಇಲಾಖೆಯ ಡಿಎಚ್‌ಒ ಮತ್ತು ಟಿಎಚ್‌ಒಗಳು ತಮ್ಮ ಸಿಬ್ಬಂದಿ ವಿವರಗಳನ್ನು ಸಂಗ್ರಹಿಸಬೇಕು. ಶಿಕ್ಷಣ ಇಲಾಖೆಯ ಡಿಡಿಪಿಐ ಅವರು ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ಸದಸ್ಯರನ್ನು ಪ್ರಕ್ರಿಯೆಯಲ್ಲಿ ಒಳಗೊಳ್ಳಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಡುಗೆ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬ ಸಿಬ್ಬಂದಿಯೂ ಸ್ವಯಂ ಗಣತಿಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬಿಸಿಎಂ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯಗಳಲ್ಲಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ತಮ್ಮ ಕುಟುಂಬದ ವಿವರಗಳನ್ನು ಆನ್‌ಲೈನ್ ಮೂಲಕ ದಾಖಲಿಸಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಸ್ವಯಂ ಗಣತಿ ಸರಳ ಪ್ರಕ್ರಿಯೆಯಾಗಿದ್ದು, ಕುಟುಂಬದ ಮುಖ್ಯಸ್ಥರ ಹೆಸರು, ಮನೆ ಪರಿಸ್ಥಿತಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಮಾಹಿತಿ ಸಂಗ್ರಹಿಸುವುದು ಸರ್ಕಾರದ ಮುಂದಿನ ಯೋಜನೆ ರೂಪಿಸಲು ಬಹಳ ಅಗತ್ಯವಾಗಿದೆ ಎಂದರು.

ಏಪ್ರಿಲ್ 15ರವರೆಗೆ ಸ್ವಯಂ ಗಣತಿಗೆ ಅವಕಾಶವಿದ್ದು, ಸಾರ್ವಜನಿಕರು Self Enumeration Census Portal ಮೂಲಕ ತಮ್ಮ ವಿವರಗಳನ್ನು ದಾಖಲಿಸಬಹುದಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಪೌರಾಯುಕ್ತೆ ಲಕ್ಷ್ಮೀ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ. ರಾಘವೇಂದ್ರ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ. ಸವಿತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಲ್ಲಿಕಾರ್ಜುನ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಜಿ. ರೇಖಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande