
ಗದಗ, 08 ಏಪ್ರಿಲ್ (ಹಿ.ಸ.)
ಆ್ಯಂಕರ್:- ಗದಗ-ಬೆಟಗೇರಿ ಅವಳಿ ನಗರದ ಮೊದಲ ಮಹಿಳಾ ಆಟೋ ಚಾಲಕಿ ರೇಖಾ ಹುಲ್ಲೂರು ಅವರಿಗೆ ಎದುರಾದ ಆರ್ಥಿಕ ಸಂಕಷ್ಟದ ಕುರಿತು ಪ್ರಕಟವಾದ ವರದಿ ಹಿನ್ನೆಲೆ, ಯಂಗ್ ಇಂಡಿಯಾ ಪರಿವಾರದಿಂದ ನೆರವು ಒದಗಿ ಬಂದಿದೆ.
ನಿನ್ನೆ ಏಪ್ರಿಲ್ 7 ರಂದು ಹಿಂದೂಸ್ತಾನ್ ಸಮಾಚಾರದಲ್ಲಿ ಪ್ರಕಟವಾದ ವರದಿಯಲ್ಲಿ ರೇಖಾ ಹುಲ್ಲೂರು ಅವರ ಸಂಕಷ್ಟದ ಬದುಕು ಬೆಳಕಿಗೆ ಬಂದಿತ್ತು. ಈ ವರದಿಯನ್ನು ಗಮನಿಸಿದ ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಅವರು ತಕ್ಷಣ ಸ್ಪಂದಿಸಿ, ರೇಖಾ ಹುಲ್ಲೂರು ಅವರ ಮನೆಗೆ ಭೇಟಿ ನೀಡಿ ಎರಡು ತಿಂಗಳ ದಿನಸಿ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕನಗೌಡ ಗೋವಿಂದಗೌಡ್ರ, ಪ್ರಸ್ತುತ ಜಾಗತಿಕ ಪರಿಸ್ಥಿತಿಗಳು ಹಾಗೂ ಯುದ್ಧದ ಪರಿಣಾಮದಿಂದ ಆಟೋ ಚಾಲಕರ ಬದುಕು ಕಷ್ಟಕರವಾಗಿದೆ. ಬ್ಯಾಂಕ್ ಸಾಲದ ಕಂತುಗಳು, ವಾಹನದ ನಿರ್ವಹಣೆ ಖರ್ಚುಗಳು ಹೆಚ್ಚಾಗಿದ್ದು, ಆದಾಯ ಕಡಿಮೆಯಾಗಿದೆ ಎಂದು ಹೇಳಿದರು.
ಆದ್ದರಿಂದ ಯುದ್ಧ ಮುಗಿಯುವವರೆಗೆ ಆಟೋ ಚಾಲಕರಿಗೆ ಪ್ರತಿ ತಿಂಗಳು ₹15,000 ಗೌರವಧನ ನೀಡಬೇಕು ಅಥವಾ ಪೆಟ್ರೋಲ್ ಬಳಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿದಿನ 3 ಲೀಟರ್ ಪೆಟ್ರೋಲ್ಗೆ ಸಬ್ಸಿಡಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ನೆರವು ಸ್ವೀಕರಿಸಿದ ರೇಖಾ ಹುಲ್ಲೂರು ಅವರು, ತಮ್ಮ ಸಂಕಷ್ಟದ ಬಗ್ಗೆ ವರದಿ ಪ್ರಕಟಿಸಿದ ಹಿಂದೂಸ್ತಾನ್ ಸಮಾಚಾರ ಹಾಗೂ ನೆರವಿಗೆ ಧಾವಿಸಿದ ಯಂಗ್ ಇಂಡಿಯಾ ಪರಿವಾರಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರವಿ ಕರಬಸಣ್ಣವರ, ಅಮರೇಶ್ ಅಂಗಡಿ, ಯಲ್ಲಪ್ಪ ಹೊಂಬಾಳ, ಕುಮಾರ್ ಜಗಳೂರು, ಮಂಜುನಾಥ್ ಮಟ್ಟಿ, ಚಂದ್ರುಗೌಡ ಸಂಕನಗೌಡ್ರ, ಈಶ್ವರ್ ಗುಡಿಮನಿ, ಶ್ರೀನಿವಾಸ್ ಖೋಡೆ, ಪ್ರವೀಣ ಛಲವಾದಿ ಸೇರಿದಂತೆ ಯಂಗ್ ಇಂಡಿಯಾ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP